ಯಲ್ಲಾಪುರ: ಜಮೀನಿಗೆ ಬೋರ್ವೆಲ್ನಿಂದ ನೀರು ಹಾಯಿಸುವ ವಿಚಾರವಾಗಿ ಉಂಟಾದ ತಕರಾರು ತಾರಕಕ್ಕೇರಿ ಜೂಜಿನಬೈಲ ಗ್ರಾಮದ ಗುರುಪ್ರಸಾದ ಮರಾಠಿ ಎಂಬುವರ ಮೇಲೆ ಅವರ ಸಂಬಂಧಿಕ ನಾಗೇಶ ಮರಾಠಿ ಕತ್ತಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜಿನಬೈಲ ಗ್ರಾಮದ ಗುರುಪ್ರಸಾದ ಮರಾಠಿ (29) ಹಲ್ಲೆಗೊಳಗಾದವರು. ಇವರ ಸಂಬಂಧಿಕ ನಾಗೇಶ ಮರಾಠಿ ಹಲ್ಲೆ ನಡೆಸಿದ ಆರೋಪಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಗೆ ಸೇರಿದ ಜಾಗದಲ್ಲಿರುವ ಬೋರ್ವೆಲ್ನಿಂದ ಗುರುಪ್ರಸಾದ ಅವರು ಹಿಂದಿನಿಂದಲೂ ತಮ್ಮ ಜಮೀನಿಗೆ ನೀರು ಹರಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಕಳೆದ ಎರಡು ವರ್ಷಗಳಿಂದ ನೀರು ಬಳಸುವ ವಿಚಾರವಾಗಿ ನಾಗೇಶ ಮರಾಠಿ ತಕರಾರು ಮಾಡುತ್ತಿದ್ದ ಎನ್ನಲಾಗಿದೆ.
ಅ. 17ರಂದು ಮಧ್ಯಾಹ್ನ 12.15ರ ಸುಮಾರಿಗೆ ಗುರುಪ್ರಸಾದ ಮರಾಠಿ ತಮ್ಮ ತಂದೆ ಕೃಷ್ಣ ಮರಾಠಿ ಜೊತೆ ಮೋಟಾರ್ ಸೈಕಲ್ನಲ್ಲಿ ಯಲ್ಲಾಪುರದಿಂದ ಜೂಜಿನಬೈಲ್ಗೆ ತೆರಳುತ್ತಿದ್ದಾಗ, ನಾಗೇಶ ಮರಾಠಿ ಎದುರಾಗಿದ್ದಾನೆ.
ಈ ವೇಳೆ ನೀರು ಹರಿಸಿಕೊಳ್ಳುವ ವಿಚಾರವಾಗಿ ಅವಾಚ್ಯವಾಗಿ ನಿಂದಿಸಿದ್ದಾನೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದಾಗ ಕೈಯಲ್ಲಿದ್ದ ಕತ್ತಿಯಿಂದ ಹಲ್ಲೆ ನಡೆಸಲು ಯತ್ನಿಸಿದ್ದು, ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಕತ್ತಿ ಗುರುಪ್ರಸಾದ ಅವರ ಕಿವಿ ಮತ್ತು ಹಣೆಗೆ ತಾಗಿ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದಲ್ಲದೆ, ಮುಂದೊಂದು ದಿನ ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


