ನಿಮ್ಮ ಕಣ್ಣಿಗೆ ಕಾಣುವುದೆಲ್ಲ ಸತ್ಯವಲ್ಲ, ಕಿವಿಗೆ ಕೇಳುವುದೆಲ್ಲ ನಿಜವಲ್ಲ!
ಒಂದು ದಿನ ನಿಮ್ಮ ಮೊಬೈಲ್ಗೆ ಪರಿಚಿತ ವ್ಯಕ್ತಿಯೊಬ್ಬರ ವಿಡಿಯೊ ಬರುತ್ತದೆ. ಅವರು ನಿಮ್ಮ ಹೆಸರನ್ನು ಹೇಳುತ್ತಾರೆ, ನಿಮಗೆ ಗೊತ್ತಿರುವ ವಿಚಾರವನ್ನೇ ಪ್ರಸ್ತಾಪಿಸುತ್ತಾರೆ, ಅಷ್ಟೇ ಅಲ್ಲ, ಅವರ ಧ್ವನಿಯೂ ಮುಖವೂ ನಿಮಗೆ ಚಿರಪರಿಚಿತ!
ಆದರೆ ಅವರು ಹೇಳುತ್ತಿರುವ ಮಾತುಗಳನ್ನೇ ಅವರು ಆಡಿಲ್ಲ ಎಂದರೆ? ಮತ್ತೊಂದು ದಿನ ನಿಮ್ಮ ಆಪ್ತರ ಧ್ವನಿಯಲ್ಲೇ ಕರೆ ಬರುತ್ತದೆ. ತುರ್ತು ಸಮಸ್ಯೆ ಎದುರಾಗಿದೆ, ಕೂಡಲೇ ಹಣ ಕಳುಹಿಸಬೇಕು ಎಂಬ ಮನವಿ ಕೇಳಿಬರುತ್ತದೆ. ಧ್ವನಿ ಅವರದ್ದೇ ಆಗಿರುವುದರಿಂದ ನೀವು ಅನುಮಾನಿಸದೆ ಹಣ ಕಳುಹಿಸುತ್ತೀರಿ. ಸ್ವಲ್ಪ ಹೊತ್ತಿನ ಬಳಿಕ ಅವರನ್ನೇ ಸಂಪರ್ಕಿಸಿದಾಗ ಅಸಲಿ ವಿಷಯ ಬಯಲಾಗುತ್ತದೆ. ಅಯ್ಯೋ, ಅದು ಅವರ ಧ್ವನಿಯೇ ಅಲ್ಲ!
ಇದು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬೆಳೆದಂತೆ ಸಾಧ್ಯವಾಗುತ್ತಿರುವ ವಂಚನೆಯ ಒಂದು ರೂಪ. ಇಷ್ಟು ದಿನ ಕಣ್ಣಾರೆ ಕಂಡಿದ್ದನ್ನು, ಕಿವಿಯಾರೆ ಕೇಳಿದ್ದನ್ನು ನಂಬುತ್ತಿದ್ದ ನಮಗೆ ಈಗ ಅದನ್ನೂ ಪರಿಶೀಲಿಸುವ ಅನಿವಾರ್ಯತೆ ಎದುರಾಗಿದೆ. ತಂತ್ರಜ್ಞಾನ ನಮ್ಮ ಬದುಕನ್ನು ಸುಲಭಗೊಳಿಸುತ್ತಿರುವಂತೆಯೇ, ಅದರ ದುರುಪಯೋಗ ಹೊಸ ಸವಾಲುಗಳನ್ನೂ ಸೃಷ್ಟಿಸುತ್ತಿದೆ.
ಏನಿದು ಡೀಪ್ಫೇಕ್ ಎಂಬ ಮಾಯಾಜಾಲ?
ಕೃತಕ ಬುದ್ಧಿಮತ್ತೆಯ ನೆರವಿನಿಂದ ಒಬ್ಬರ ಮುಖವನ್ನು ಮತ್ತೊಬ್ಬರ ಮುಖದೊಂದಿಗೆ ಬದಲಿಸುವುದು, ಅವರೇ ಮಾತನಾಡಿದಂತೆ ವಿಡಿಯೊ ಸೃಷ್ಟಿಸುವುದು ಅಥವಾ ಅವರ ಧ್ವನಿಯನ್ನು ಅನುಕರಿಸುವುದನ್ನು ಸಾಮಾನ್ಯವಾಗಿ ಡೀಪ್ಫೇಕ್ ತಂತ್ರಜ್ಞಾನದ ಬಳಕೆಯ ಉದಾಹರಣೆಗಳೆಂದು ಹೇಳಬಹುದು. ಕೆಲವೇ ಸೆಕೆಂಡುಗಳ ಧ್ವನಿ ಮಾದರಿಯ ನೆರವಿನಿಂದಲೂ ಧ್ವನಿಯನ್ನು ಅನುಕರಿಸುವ ತಂತ್ರಜ್ಞಾನ ಲಭ್ಯವಿದೆ.
ಇದರ ಬಳಕೆ ಎಲ್ಲವೂ ಕೆಟ್ಟದ್ದೇನಲ್ಲ. ಸಿನಿಮಾ, ಶಿಕ್ಷಣ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿ ಇದಕ್ಕೆ ಉಪಯುಕ್ತ ಅವಕಾಶಗಳಿವೆ. ಆದರೆ ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ನಕಲಿ ವಿಡಿಯೊಗಳನ್ನು ಸೃಷ್ಟಿಸುವುದು, ವ್ಯಕ್ತಿಗಳ ಹೆಸರಿಗೆ ಮಸಿ ಬಳಿಯುವುದು, ಸುಳ್ಳು ಸುದ್ದಿಗಳನ್ನು ಹರಡುವುದು ಹಾಗೂ ಹಣ ವಂಚಿಸುವುದು ಸಾಧ್ಯವಾಗಿರುವುದು ಆತಂಕಕಾರಿ ಸಂಗತಿ. ಇಂತಹ ಅಪಾಯಗಳ ಬಗ್ಗೆ ಭಾರತದ ಸೈಬರ್ ಸುರಕ್ಷತಾ ಸಂಸ್ಥೆ CERT-In ಕೂಡ ಎಚ್ಚರಿಸಿದೆ.
ಧ್ವನಿ ಪರಿಚಿತವಿದ್ದರೆ ಸಾಕೇ?
ಇತ್ತೀಚಿನ ದಿನಗಳಲ್ಲಿ ವಂಚಕರು ಬಳಸಬಹುದಾದ ಒಂದು ವಿಧಾನವೆಂದರೆ ಪರಿಚಿತರ ಧ್ವನಿಯನ್ನು ಅನುಕರಿಸಿ ಹಣ ಕೇಳುವುದು. ಕುಟುಂಬದ ಸದಸ್ಯರೋ, ಸ್ನೇಹಿತರೋ ಅಥವಾ ಕಚೇರಿಯ ಅಧಿಕಾರಿಯೋ ಮಾತನಾಡುತ್ತಿರುವಂತೆ ಧ್ವನಿ ಸೃಷ್ಟಿಸಿ, ತುರ್ತು ಪರಿಸ್ಥಿತಿಯ ನೆಪದಲ್ಲಿ ಹಣ ವರ್ಗಾಯಿಸಲು ಒತ್ತಡ ಹೇರಬಹುದು.
ಇಂತಹ ಕರೆ ಬಂದಾಗ ಗಾಬರಿಯಾಗಬಾರದು. ಕರೆ ಮಾಡಿದವರ ಸಾಮಾನ್ಯ ಮೊಬೈಲ್ ಸಂಖ್ಯೆಗೆ ಪ್ರತ್ಯೇಕವಾಗಿ ಕರೆ ಮಾಡಿ ಪರಿಶೀಲಿಸಬೇಕು. ಹಣದ ವಿಷಯದಲ್ಲಿ ಆತುರಪಡಿಸುವುದು, ಯಾರಿಗೂ ಹೇಳಬೇಡಿ ಎನ್ನುವುದು ಅಥವಾ ತಕ್ಷಣ ನಿರ್ಧಾರ ಕೈಗೊಳ್ಳುವಂತೆ ಒತ್ತಡ ಹೇರುವುದು ಕಂಡುಬಂದರೆ ಮತ್ತಷ್ಟು ಎಚ್ಚರ ವಹಿಸಬೇಕು.
ವಿಡಿಯೊ ನಿಜವೋ, ಸುಳ್ಳೋ ತಿಳಿಯುವುದು ಹೇಗೆ?
ವಿಡಿಯೊದಲ್ಲಿನ ವ್ಯಕ್ತಿಯ ತುಟಿಗಳ ಚಲನೆ ಮತ್ತು ಮಾತಿನ ನಡುವೆ ಹೊಂದಾಣಿಕೆ ಇದೆಯೇ, ಮುಖಭಾವಗಳು ಸಹಜವಾಗಿವೆಯೇ, ಬೆಳಕು ಮತ್ತು ನೆರಳುಗಳು ಸರಿಯಾಗಿವೆಯೇ ಎಂಬುದನ್ನು ಗಮನಿಸಬಹುದು. ಧ್ವನಿಯಲ್ಲಿ ಅಸಹಜ ಏರಿಳಿತ ಅಥವಾ ಚಿತ್ರದಲ್ಲಿ ವಿಚಿತ್ರ ಚಲನೆಗಳೂ ಅನುಮಾನಕ್ಕೆ ಕಾರಣವಾಗಬಹುದು.
ಆದರೆ ಒಂದು ವಿಷಯ ನೆನಪಿರಲಿ. ಈ ಲಕ್ಷಣಗಳಿಲ್ಲವೆಂದ ಮಾತ್ರಕ್ಕೆ ವಿಡಿಯೊ ನಿಜವೆಂದು ಖಚಿತಪಡಿಸಲಾಗುವುದಿಲ್ಲ. ಈಗಿನ ತಂತ್ರಜ್ಞಾನದಲ್ಲಿ ಅತ್ಯಂತ ನೈಜವಾಗಿ ಕಾಣುವ ನಕಲಿ ವಿಡಿಯೊಗಳನ್ನೂ ಸೃಷ್ಟಿಸಬಹುದು. ಹೀಗಾಗಿ ಅದರ ಮೂಲವನ್ನೂ ಪರಿಶೀಲಿಸುವದು ಅಗತ್ಯ.
ಸುಳ್ಳು ಸುದ್ದಿಗೆ ನಮ್ಮ ಮೊಬೈಲೇ ವಾಹಕವಾಗದಿರಲಿ!
ವಾಟ್ಸಪ್ನಲ್ಲಿ ಬಂದ ಮೆಸೇಜ್ಗಳನ್ನು ನಿಜವೆಂದು ಭಾವಿಸಿ ವಿಚಾರ ಮಾಡದೇ ಮತ್ತೊಬ್ಬರಿಗೆ ಕಳುಹಿಸುವುದು ನಮಗೆ ಸಾಮಾನ್ಯ ಅಭ್ಯಾಸ. ಆದರೆ ಪರಿಶೀಲಿಸದ ಒಂದು ಮೇಸೇಜ್ ಕೆಲವೇ ನಿಮಿಷಗಳಲ್ಲಿ ಸಾವಿರಾರು ಜನರನ್ನು ತಲುಪಬಹುದು. ಅದರಲ್ಲೂ ಕೃತಕ ಚಿತ್ರಗಳು, ಹಳೆಯ ಘಟನೆಗಳ ವಿಡಿಯೊಗಳನ್ನು ಹೊಸ ಘಟನೆಗಳೆಂದು ಬಿಂಬಿಸುವ ಸಂದೇಶಗಳು ಮತ್ತು ಪ್ರಸಿದ್ಧ ವ್ಯಕ್ತಿಗಳ ಹೆಸರಿನಲ್ಲಿ ಹರಡುವ ನಕಲಿ ಹೇಳಿಕೆಗಳು ಜನರನ್ನು ದಾರಿ ತಪ್ಪಿಸಬಹುದು.
ಯಾವುದೇ ಸುದ್ದಿಯನ್ನು ಹಂಚಿಕೊಳ್ಳುವ ಮೊದಲು ಅದರ ಮೂಲವನ್ನು ಪರಿಶೀಲಿಸಿ. ಅನುಮಾನವಿದ್ದರೆ ಹಂಚಿಕೊಳ್ಳದಿರುವುದೇ ಉತ್ತಮ. ಸುಳ್ಳು ಸುದ್ದಿ ಹರಡಿದ ನಂತರ ಅದನ್ನು ಅಳಿಸುವುದರಿಂದ ಪ್ರಯೋಜನವಿಲ್ಲ. ನೀವು ಕಳಿಸಿದ ಗ್ರೂಪ್ಗಳ ಸದಸ್ಯರಲ್ಲಿ ಆ ಚಿತ್ರ ಅಥವಾ ವಿಡಿಯೋ ಹಾಗೆಯೇ ಉಳಿದಿರಬುದು!
ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ
ಅಪರಿಚಿತ ಲಿಂಕ್ಗಳನ್ನು ತೆರೆಯಬೇಡಿ. OTP, ಪಾಸ್ವರ್ಡ್, ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅನುಮಾನಾಸ್ಪದ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಮತ್ತು ಕುಟುಂಬದವರ ವೈಯಕ್ತಿಕ ಚಿತ್ರ, ಧ್ವನಿ ಹಾಗೂ ಮಾಹಿತಿಯನ್ನು ಅನಗತ್ಯವಾಗಿ ಸಾರ್ವಜನಿಕಗೊಳಿಸುವುದನ್ನು ತಪ್ಪಿಸಿ.
ನಕಲಿ ಕರೆ ಅಥವಾ ಸಂದೇಶದಿಂದ ಹಣ ಕಳೆದುಕೊಂಡರೆ ತಕ್ಷಣವೇ 1930 ಸೈಬರ್ ವಂಚನೆ ಸಹಾಯವಾಣಿಯನ್ನು ಸಂಪರ್ಕಿಸಿ. ಸಾಧ್ಯವಾದಷ್ಟು ಬೇಗ ವರದಿ ಮಾಡುವುದರ ಜೊತೆಗೆ ಸಂದೇಶಗಳು, ಕರೆ ವಿವರಗಳು ಮತ್ತು ಹಣ ವರ್ಗಾವಣೆಯ ದಾಖಲೆಗಳನ್ನು ಉಳಿಸಿಕೊಳ್ಳಿ.
ತಂತ್ರಜ್ಞಾನವನ್ನು ಸಂಪೂರ್ಣವಾಗಿ ಅನುಮಾನಿಸುವುದೂ ಸರಿಯಲ್ಲ, ಕಣ್ಣುಮುಚ್ಚಿ ನಂಬುವುದೂ ಬುದ್ಧಿವಂತಿಕೆಯಲ್ಲ. ಸತ್ಯವನ್ನು ಪರಿಶೀಲಿಸುವ ಅಭ್ಯಾಸವೇ ಇಂದಿನ ಡಿಜಿಟಲ್ ಜಗತ್ತಿನಲ್ಲಿ ನಮ್ಮ ದೊಡ್ಡ ರಕ್ಷಾಕವಚ.
ಒಂದು ಕಾಲದಲ್ಲಿ ಹಿರಿಯರು, ʻಕಣ್ಣಾರೆ ಕಂಡರೂ ಪರಾಂಬರಿಸಿ ನೋಡುʼ ಎಂದು ಹೇಳುತ್ತಿದ್ದರು. ಈಗ ಅದೇ ಮಾತಿಗೆ ಹೊಸ ಅರ್ಥ ಬಂದಿದೆ. ಕಣ್ಣಿಗೆ ಕಾಣುವ ಚಿತ್ರಕ್ಕೂ, ಕಿವಿಗೆ ಕೇಳುವ ಧ್ವನಿಗೂ ಸಾಕ್ಷಿ ಕೇಳಬೇಕಾದ ಕಾಲವಿದು. ಮುಂದಿನ ಬಾರಿ ನಿಮ್ಮ ಮೊಬೈಲ್ನಲ್ಲಿ ನಂಬಲಾಗದಷ್ಟು ನೈಜವಾಗಿ ಕಾಣುವ ವಿಡಿಯೊವೊಂದು ಬಂದರೆ, ಅದನ್ನು ತಕ್ಷಣ ಶೇರ್ ಮಾಡುವ ಮೊದಲು ಮತ್ತೊಮ್ಮೆ ಯೋಚಿಸಿ!
– ಸತೀಶ್ ಮಾಗೋಡ್ | ಕೆನರಾ ನೆಕ್ಸ್ಟ್ ಡೆಸ್ಕ್.