Friday, July 24, 2026
Join WhatsApp Group
HomeLocal Newsದರೋಡೆ ಸಿದ್ಧತೆಯಲ್ಲಿದ್ದ ಗ್ಯಾಂಗ್ ಯಲ್ಲಾಪುರದಲ್ಲಿ ಅರೆಸ್ಟ್

ದರೋಡೆ ಸಿದ್ಧತೆಯಲ್ಲಿದ್ದ ಗ್ಯಾಂಗ್ ಯಲ್ಲಾಪುರದಲ್ಲಿ ಅರೆಸ್ಟ್

ಯಲ್ಲಾಪುರ: ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿಯ ಕೆ ಮಿಲನ್ ಹೋಟೆಲ್ ಸಮೀಪ ದರೋಡೆ ಮಾಡಲು ಮಾರಕಾಸ್ತ್ರಗಳೊಂದಿಗೆ ಹೊಂಚು ಹಾಕುತ್ತಿದ್ದ ಅಂತರ್‌ರಾಜ್ಯ ದರೋಡೆಕೋರರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.

ಬುಧವಾರ ನಸುಕಿನ  5.30 ಗಂಟೆ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಸಿದ್ದಪ್ಪ ಗುಡಿ ಅವರ ನೇತೃತ್ವದಲ್ಲಿ ಯಲ್ಲಾಪುರ ಪೊಲೀಸ್ ಠಾಣೆ ಸಿಬ್ಬಂದಿ ದಾಳಿ ನಡೆಸಿ 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಉಮೇಶ ರಾಮಾ ಗಾಯಕವಾಡ (35) ಮಹಾರಾಷ್ಟ್ರ, ಶ್ರೀನಾಥ ಶಂಕರ ಜಾದವ (39) ಮಹಾರಾಷ್ಟ್ರ, ಲಖನ್ ಸುಹಾಸ್ ಜಾದವ (30) ಮಹಾರಾಷ್ಟ್ರ, ಪ್ರಶಾಂತ ಅಖಿಲ್ ಪವಾರ (35) ಮಹಾರಾಷ್ಟ್ರ, ದೀಪಕ್ ಚಂದರಲಾಲ್ ದುಂಬಾನಿ (47) ಥಾಣೆ, ಸುಂದರ ಕೈಲಾಸ್ ಗಾಯಕವಾಡ (50) ಥಾಣೆ, ನಾಗುಬಾಯಿ ಗಣೇಶ ಜಾದವ (60) ಅಂಬರನಾಥ, ಅಂಬಿಕಾ ಪ್ರಕಾಶ ಜಾದವ (39) ಅಂಬರನಾಥ ಬಂಧಿತ ಆರೋಪಿಗಳು.

ಆರೋಪಿತರು ದಕ್ಷಿಣ ಭಾರತದ ಪ್ರವಾಸಿ ತಾಣಗಳು ಹಾಗೂ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿ ಜನಸಂದಣಿ ಇರುವ ಪ್ರದೇಶಗಳಲ್ಲಿ ಜೇಬುಕಳ್ಳತನ, ಮಹಿಳೆಯರ ಚೈನ್ ಕಳವು ಮುಂತಾದ ಕೃತ್ಯಗಳಲ್ಲಿ ತೊಡಗಿಕೊಂಡಿದ್ದರು. ಜಾತ್ರೆ, ಮಹೋತ್ಸವಗಳ ಬಗ್ಗೆ ಪೂರ್ವ ಮಾಹಿತಿ ಪಡೆದು ಅಲ್ಲಿ ಕಳ್ಳತನ ನಡೆಸುವುದು ಇವರ ರೂಢಿಯಾಗಿತ್ತು.

ಕೃತ್ಯ ಎಸಗಿದ ಬಳಿಕ ತಮ್ಮ ವಾಹನದಲ್ಲಿ ಪರಾರಿಯಾಗುತ್ತಿದ್ದ ಈ ಗ್ಯಾಂಗ್, ಹಿಡಿಯಲು ಯತ್ನಿಸಿದವರ ಮೇಲೆ ಕಲ್ಲು ತೂರಿ ಹಲ್ಲೆ ಮಾಡುವ ಸ್ವಭಾವ ಹೊಂದಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಕಳೆದ 3–4 ವರ್ಷಗಳಿಂದ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಕಳ್ಳತನ, ದರೋಡೆ ಹಾಗೂ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ.

ಬುಧವಾರ ಶಿರಸಿಯ ಪ್ರಸಿದ್ಧ ಮಾರಿಕಾಂಬಾ ಜಾತ್ರೆಯಲ್ಲಿ ಆರಂಭವಾಗಿದ್ದು, ಕಳ್ಳತನ ಮಾಡುವ ಉದ್ದೇಶದಿಂದ ಮಹಾರಾಷ್ಟ್ರದಿಂದ ಆಗಮಿಸಿರುವುದಾಗಿ ಆರೋಪಿತರು ಒಪ್ಪಿಕೊಂಡಿದ್ದಾರೆ. ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಹಾಗೂ ಮುರುಡೇಶ್ವರ ಪ್ರದೇಶಗಳಲ್ಲಿಯೂ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಇದೆ.

ಬಂಧಿತರಿಂದ ಖಾರದ ಪುಡಿ ಪ್ಯಾಕೆಟ್, ಕಬ್ಬಿಣದ ರಾಡ್ ಸೇರಿದಂತೆ ಒಟ್ಟು ಸುಮಾರು 4 ಲಕ್ಷ ರೂ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್‌ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಶಿರಸಿ ಉಪವಿಭಾಗದ ಪೊಲೀಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಯಲ್ಲಾಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಮೇಶ್ ಹನಾಪುರ ಹಾಗೂ ಗೋಕರ್ಣ ಠಾಣೆಯ ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್ ಅವರ ನೇತೃತ್ವದಲ್ಲಿ ಪಿಎಸ್‌ಐಗಳು, ಎಎಸ್‌ಐಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 42/2026, ಕಲಂ 310(4) ಬಿಎನ್‌ಎಸ್-2023 ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share