ಶಿರಸಿ: ಅಡಿಕೆ ಖರೀದಿಸಿ ಹಣ ಪಾವತಿಸದೆ ವಂಚಿಸಿದ ಆರೋಪದಡಿ ಗುಜರಾತ್ ಮೂಲದ ಮೂವರ ವಿರುದ್ಧ ಅಡಿಕೆ ವ್ಯಾಪಾರಿ ರಾಘವೇಂದ್ರ ವೆಂಕಟ್ರಮಣ ಹೆಗಡೆ ಶಿರಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಶಿರಸಿ ಎಪಿಎಂಸಿಯಲ್ಲಿ ಕಳೆದ 26 ವರ್ಷಗಳಿಂದ ಭಾಗೀರಥಿ ಟ್ರೇಡಿಂಗ್ ಕಂಪನಿ ನಡೆಸುತ್ತಿರುವ ಪ್ರಗತಿನಗರದ ರಾಘವೇಂದ್ರ ವೆಂಕಟ್ರಮಣ ಹೆಗಡೆ ತಮಗಾದ ಮೋಸದ ಬಗ್ಗೆ ದೂರು ನೀಡಿದ್ದಾರೆ.
2026ರ ಜೂನ್ 24ರಂದು ಗುಜರಾತ್ ಮೂಲದ ಖರೀದಿದಾರರಾದ ರಿಷಿ ಶಾಹ, ಬಾಬುಲಾಲ ಹಡಿಯಾ ಮತ್ತು ಮಹೇಶ ಐಹೀರ್ ಎಂಬವರು ಭಾಗೀರಥಿ ಟ್ರೇಡಿಂಗ್ ಕಂಪನಿಗೆ ಬಂದು ಅಡಿಕೆ ಖರೀದಿಸಿದ್ದರು.
ಆ ನಂತರವೂ ಪರಿಚಯ ಮತ್ತು ವಿಶ್ವಾಸದ ಆಧಾರದಲ್ಲಿ ವ್ಯಾಪಾರ ಮುಂದುವರಿದಿತ್ತು. ಬಳಿಕ ವಿವಿಧ ದಿನಾಂಕಗಳಲ್ಲಿ ಗುಜರಾತ್‌ನ ಜೈ ಮಾತಾದಿ ಟ್ರೇಡಿಂಗ್ ಮತ್ತು ಶ್ರೀ ಕೋಡಿಯಾರ್ ಟ್ರೇಡರ್ಸ್ ಸಂಸ್ಥೆಗಳ ವಿಳಾಸಗಳಿಗೆ ವಿಆರ್‌ಎಲ್ ವಾಹನಗಳ ಮೂಲಕ ವಿವಿಧ ಹಂತಗಳಲ್ಲಿ ಒಟ್ಟು 33,99,170 ರೂ ಮೌಲ್ಯದ ಅಡಿಕೆಯನ್ನು ಕಳುಹಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಪೈಕಿ 5,45,195 ರೂ ಹಣವನ್ನು ಆರ್‌ಟಿಜಿಎಸ್ ಮೂಲಕ ರಾಘವೇಂದ್ರ ವೆಂಕಟ್ರಮಣ ಹೆಗಡೆ ಅವರಿಗೆ ಪಾವತಿಸಲಾಗಿದ್ದು, ಉಳಿದ 28,53,975 ರೂ ಹಣವನ್ನು ಪಾವತಿಸುವಂತೆ ಕೇಳಿದ್ದಾರೆ. ಆದರೆ, ಆರೋಪಿತರು ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ವ್ಯಾಪಾರದಲ್ಲಿ ಉತ್ತಮ ವ್ಯವಹಾರದ ಭರವಸೆ ನೀಡಿ ಅಡಿಕೆ ಪಡೆದು ಹಣ ಪಾವತಿಸದೆ ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಘವೇಂದ್ರ ಹೆಗಡೆ ಮನವಿ ಮಾಡಿದ್ದಾರೆ. ದೂರಿನಲ್ಲಿ ಉಲ್ಲೇಖಿಸಿರುವ ಆರೋಪಗಳ ಕುರಿತು ತನಿಖೆಯಿಂದ ಸತ್ಯಾಸತ್ಯತೆ ತಿಳಿದುಬರಬೇಕಿದೆ.