ಮಲೆನಾಡಿನ ರೈತನಿಗೆ ಮುಂಜಾನೆ ಎದ್ದ ತಕ್ಷಣ ತೋಟದ ಕಡೆಗೆ ಕಣ್ಣು ಹಾಯಿಸುವದು ಅಭ್ಯಾಸ. ಅಡಿಕೆ ತೋಟದಲ್ಲಿ ತೇವಾಂಶ ಹೇಗಿದೆ, ಮಳೆ ಬರುವ ಲಕ್ಷಣವಿದೆಯೇ, ಇವತ್ತು ಕೂಲಿ ಕೆಲಸಕ್ಕೆ ಜನ ಸಿಗುತ್ತಾರೆಯೇ ಎಂಬ ಲೆಕ್ಕಾಚಾರ ಮನಸ್ಸಿನಲ್ಲಿರುತ್ತದೆ.
ಆದರೆ ಇಂದಿನ ಕಾಲದಲ್ಲಿ ಈ ಲೆಕ್ಕಾಚಾರಕ್ಕೆ ಮೊಬೈಲ್ ಕೂಡ ಒಂದಷ್ಟು ನೆರವು ನೀಡಬಲ್ಲದು. ಕೈಯಲ್ಲಿರುವ ಸ್ಮಾರ್ಟ್‌ಫೋನ್ ಕೇವಲ ಮಾತಾಡುವ ಸಾಧನ, ಯಕ್ಷಗಾನವನ್ನೋ, ಸಿನಿಮಾ-ಧಾರಾವಾಹಿಗಳನ್ನೋ ನೋಡುವ ಸಾಧನವಷ್ಟೇ ಅಲ್ಲ. ಸರಿಯಾಗಿ ಬಳಸಿದರೆ ಕೃಷಿ ಮಾಹಿತಿ ಪಡೆಯುವ, ಹವಾಮಾನ ತಿಳಿಯುವ, ಮಾರುಕಟ್ಟೆ ಬೆಲೆ ಅರಿಯುವ ಮತ್ತು ಸರ್ಕಾರಿ ಸೌಲಭ್ಯಗಳ ಮಾಹಿತಿ ಪಡೆದುಕೊಳ್ಳುವ ಉಪಯುಕ್ತ ಸಾಧನ.
ಮಲೆನಾಡಿನ ರೈತರು ಮಳೆ ಮತ್ತು ಹವಾಮಾನವನ್ನು ನಂಬಿಕೊಂಡೇ ಕೃಷಿ ಮಾಡಬೇಕಾದ ಪರಿಸ್ಥಿತಿ ಈಗಲೂ ಇದೆ. ಆದರೆ ಹವಾಮಾನ ಮುನ್ಸೂಚನೆ ನೋಡಿಕೊಂಡರೆ ಕೆಲಸದ ಯೋಜನೆ ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ. ಮಳೆ ಬರುವ ಸಾಧ್ಯತೆ ಇದ್ದರೆ ಔಷಧ ಸಿಂಪಡಣೆ ಮುಂದೂಡಬೇಕೇ, ಗೊಬ್ಬರ ಹಾಕುವ ಸಮಯ ಬದಲಿಸಬೇಕೇ ಎಂಬ ನಿರ್ಧಾರಕ್ಕೆ ಮಾಹಿತಿ ನೆರವಾಗಬಹುದು.
ಭಾರತ ಹವಾಮಾನ ಇಲಾಖೆ ಹಾಗೂ ಸಂಬಂಧಿತ ಸರ್ಕಾರಿ ವ್ಯವಸ್ಥೆಗಳ ಮೂಲಕ ಕೃಷಿಗೆ ಸಂಬಂಧಿಸಿದ ಹವಾಮಾನ ಮುನ್ಸೂಚನೆ ಮತ್ತು ಸಲಹೆಗಳನ್ನು ಪಡೆಯುವ ಅವಕಾಶವಿದೆ. ‘ಮೇಘದೂತ್’ ಆ್ಯಪ್ ಕೂಡ ಈ ನಿಟ್ಟಿನಲ್ಲಿ ರೈತರಿಗೆ ನೆರವಾಗುತ್ತದೆ.
ಅಡಿಕೆ, ಕಾಳುಮೆಣಸು, ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ರೈತರಿಗೆ ಕೃಷಿ ತಜ್ಞರ ಸಲಹೆ ಬಹಳ ಮುಖ್ಯ. ಗಿಡಗಳಲ್ಲಿ ರೋಗ ಕಾಣಿಸಿಕೊಂಡಾಗ ಅಥವಾ ಇಳುವರಿ ಕಡಿಮೆಯಾದಾಗ ಎಲ್ಲರ ಸಲಹೆ ಕೇಳುವುದಕ್ಕಿಂತ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಅಥವಾ ವಿಶ್ವಾಸಾರ್ಹ ಕೃಷಿ ತಜ್ಞರನ್ನು ಸಂಪರ್ಕಿಸುವುದು ಉತ್ತಮ. ಕೇಂದ್ರ ಸರ್ಕಾರದ ‘ಕಿಸಾನ್ ಸಾರಥಿ’ ವೇದಿಕೆಯ ಮೂಲಕವೂ ಕೃಷಿ ಸಲಹೆ, ಹವಾಮಾನ ಮಾಹಿತಿ, ಮಾರುಕಟ್ಟೆ ಬೆಲೆ ಹಾಗೂ ವಿವಿಧ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬಹುದು.
ಸರ್ಕಾರಿ ಯೋಜನೆಗಳ ಮಾಹಿತಿ ಪಡೆಯುವುದಕ್ಕೂ ಮೊಬೈಲ್ ಉಪಯುಕ್ತ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಗಳು ತಮ್ಮ ಅರ್ಹತೆ, ಕಂತಿನ ಸ್ಥಿತಿ ಮತ್ತು ಇತರ ವಿವರಗಳನ್ನು ಅಧಿಕೃತ ಪೋರ್ಟಲ್‌ನಲ್ಲಿ ಪರಿಶೀಲಿಸಬಹುದು. ಇದಕ್ಕಾಗಿ ಮಧ್ಯವರ್ತಿಗಳನ್ನೇ ಅವಲಂಬಿಸಬೇಕೆಂದಿಲ್ಲ. ಆದರೆ ಸರ್ಕಾರಿ ಯೋಜನೆಯ ಹೆಸರಿನಲ್ಲಿ ಬರುವ ಪ್ರತಿಯೊಂದು ಸಂದೇಶವನ್ನೂ ನಂಬಬಾರದು. ಅಧಿಕೃತ ವೆಬ್‌ಸೈಟ್ ಮೂಲಕವೇ ಮಾಹಿತಿ ಪರಿಶೀಲಿಸುವುದು ಮುಖ್ಯ.
ಇಷ್ಟೆಲ್ಲ ಅನುಕೂಲಗಳಿರುವಾಗ ಒಂದು ಎಚ್ಚರಿಕೆಯೂ ಅಗತ್ಯ. ರೈತರ ಹೆಸರಿನಲ್ಲಿ ವಂಚನೆ ಮಾಡುವವರೂ ಡಿಜಿಟಲ್ ಜಗತ್ತಿನಲ್ಲಿದ್ದಾರೆ. ‘ನಿಮ್ಮ ಖಾತೆಗೆ ಹಣ ಜಮೆಯಾಗಲಿದೆ’, ‘ಕಿಸಾನ್ ಯೋಜನೆಯ ಹಣ ಪಡೆಯಲು ತಕ್ಷಣ ಲಿಂಕ್ ಒತ್ತಿ’, ‘ಆಧಾರ್ ಮತ್ತು ಬ್ಯಾಂಕ್ ವಿವರಗಳನ್ನು ಅಪ್‌ಡೇಟ್ ಮಾಡಿ’ ಎಂಬ ಸಂದೇಶಗಳು ಬಂದರೆ ಆತುರಪಡಬಾರದು.
ಅಪರಿಚಿತ ಲಿಂಕ್ ತೆರೆಯುವುದು, ತಿಳಿಯದ ಆ್ಯಪ್ ಇನ್‌ಸ್ಟಾಲ್ ಮಾಡುವುದು ಅಥವಾ ಅಪರಿಚಿತರಿಗೆ ಓಟಿಪಿ, ಬ್ಯಾಂಕ್ ವಿವರ ಮತ್ತು ಪಿನ್ ನೀಡುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಯಾರಾದರೂ ಸರ್ಕಾರಿ ಅಧಿಕಾರಿ ಅಥವಾ ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡರೂ ಅವರ ಗುರುತನ್ನು ಖಚಿತಪಡಿಸಿಕೊಳ್ಳದೆ ವೈಯಕ್ತಿಕ ಮಾಹಿತಿ ನೀಡಬಾರದು.
ಇನ್ನೊಂದು ಮುಖ್ಯ ವಿಷಯವೆಂದರೆ, ಮೊಬೈಲ್‌ನಲ್ಲಿ ಕಾಣಿಸುವ ಕೃಷಿ ಸಲಹೆಗಳೆಲ್ಲವೂ ಎಲ್ಲ ಪ್ರದೇಶಗಳಿಗೂ ಒಂದೇ ರೀತಿಯಲ್ಲಿ ಅನ್ವಯಿಸುವುದಿಲ್ಲ. ಶಿರಸಿ/ಯಲ್ಲಾಪುರದಂತಹ ಮಲೆನಾಡಿನ ಹವಾಮಾನ, ಮಣ್ಣಿನ ಗುಣ, ತೋಟದ ಸ್ಥಿತಿ ಮತ್ತು ಕರಾವಳಿ ಭಾಗದ ಕಾರವಾರ, ಅಂಕೋಲಾಗಳ ಪರಿಸ್ಥಿತಿಯಲ್ಲಿ ವ್ಯತ್ಯಾಸವಿರಬಹುದು.
ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಕಂಡ ಮಾಹಿತಿಯನ್ನು ಹಾಗೆಯೇ ಅನುಸರಿಸುವ ಬದಲು ಸ್ಥಳೀಯ ಕೃಷಿ ತಜ್ಞರ ಸಲಹೆಯನ್ನೂ ಪಡೆಯಬೇಕು. ಅದೇ ರೀತಿ, ಅಡಿಕೆ ಮಾರುಕಟ್ಟೆ ಬೆಲೆ ತಿಳಿದುಕೊಳ್ಳುವಾಗ ದಿನಾಂಕ, ಮಾರುಕಟ್ಟೆ ಮತ್ತು ಗುಣಮಟ್ಟದ ವ್ಯತ್ಯಾಸಗಳನ್ನೂ ಗಮನಿಸಬೇಕು.
ತಂತ್ರಜ್ಞಾನವನ್ನು ಬಳಸಲು ದೊಡ್ಡ ಓದು ಬೇಕೆಂದಿಲ್ಲ. ಕಲಿಯುವ ಆಸಕ್ತಿ ಮತ್ತು ಸ್ವಲ್ಪ ಎಚ್ಚರಿಕೆ ಸಾಕು. ಮೊಬೈಲ್ ಬಳಕೆ ತಿಳಿದಿರುವ ಮನೆಯ ಯುವಕರು ಹಿರಿಯ ರೈತರಿಗೆ ಅಧಿಕೃತ ಆ್ಯಪ್‌ಗಳನ್ನು ಬಳಸುವುದನ್ನು ಕಲಿಸಬಹುದು. ಗ್ರಾಮಮಟ್ಟದಲ್ಲಿ ವಿಶ್ವಾಸಾರ್ಹ ಕೃಷಿ ಮಾಹಿತಿ ಹಂಚಿಕೊಳ್ಳುವ ಅಭ್ಯಾಸ ಬೆಳೆದರೆ ಅದರ ಪ್ರಯೋಜನ ಎಲ್ಲರಿಗೂ ಸಿಗುತ್ತದೆ.
ಇವೆಲ್ಲವುಗಳ ನಡುವೆ, ರೈತನ ಅನುಭವಕ್ಕೆ ಪರ್ಯಾಯ ಯಾವುದೂ ಇಲ್ಲ. ತೋಟದ ಮಣ್ಣು, ಗಿಡದ ಲಕ್ಷಣ ಮತ್ತು ಹವಾಮಾನದ ಬದಲಾವಣೆಯನ್ನು ಗಮನಿಸುವ ಜ್ಞಾನ ರೈತನಲ್ಲೇ ಇರುತ್ತದೆ. ಆ ಅನುಭವಕ್ಕೆ ಸರಿಯಾದ ಡಿಜಿಟಲ್ ಮಾಹಿತಿ ಜೊತೆಯಾದರೆ ನಿರ್ಧಾರ ಇನ್ನಷ್ಟು ಸುಲಭ!


