ಕಾರವಾರ: ತಾಲೂಕಿನ ಮಾಜಾಳಿಯ ಬಳಿ ಹಸುವೊಂದು ರಸ್ತೆಗೆ ಅಡ್ಡ ಬಂದ ಪರಿಣಾಮ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರವಾರದ ಖ್ಯಾತ ಚರ್ಮರೋಗ ತಜ್ಞ ಡಾ. ಸುಭಾಷ್ ತಾಂಡೇಲ್ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಅವರು ಮಾಜಾಳಿಯ ಬಾಬಾ ರಾಮದೇವ್ ಹೋಟೆಲ್ ಬಳಿ ತಮ್ಮ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಎದುರಿಗೆ ದಿಢೀರನೆ ಬೀದಿ ಹಸುವೊಂದು ಅಡ್ಡ ಬಂದಿದ್ದರಿಂದ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಕೊನೆಯುಸಿರೆಳೆದಿದ್ದು, ಕುಟುಂಬದವರು, ಸ್ನೇಹಿತರು ಹಾಗೂ ಪರಿಚಿತರಲ್ಲಿ ಶೋಕ ಆವರಿಸಿದೆ.
ಸರ್ಕಾರಿ ಸೇವೆಯಿಂದ ಇತ್ತೀಚೆಗೆ ನಿವೃತ್ತರಾಗಿದ್ದ ಡಾ. ಸುಭಾಷ್ ತಾಂಡೇಲ್ ಅವರು ಈ ಹಿಂದೆ ಕಾರವಾರ ಜಿಲ್ಲಾ ಆಸ್ಪತ್ರೆ, ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್)ಯಲ್ಲಿ ಸೇವೆ ಸಲ್ಲಿಸಿದ್ದರು.
ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತದ ನಿಖರ ಕಾರಣದ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.


