ಯಲ್ಲಾಪುರ: ಉಳಿತಾಯ, ಹೂಡಿಕೆ ಮತ್ತು ಆರೋಗ್ಯ ವಿಮೆಯ ಕುರಿತು ಸಾರ್ವಜನಿಕರಲ್ಲಿ ಹಣಕಾಸಿನ ಅರಿವು ಮೂಡಿಸುವ ಉದ್ದೇಶದಿಂದ ಅ. 24ರಂದು ಪಟ್ಟಣದ ಅಡಿಕೆ ಭವನದಲ್ಲಿ ‘ಅರ್ಥ ಸೇತು’ ಎಂಬ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಸಂಘಟಕರಲ್ಲೊಬ್ಬರಾದ ಸತೀಶ ಹೆಬ್ಬಾರ್ ತಿಳಿಸಿದ್ದಾರೆ.
ಮಧ್ಯಾಹ್ನ 2.30ಕ್ಕೆ ಆರಂಭವಾಗಲಿರುವ ಕಾರ್ಯಾಗಾರದಲ್ಲಿ ಐ.ಐ.ಎಫ್.ಎಲ್ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಪ್ರವೀಣ್ ಎಸ್. ಕವಡಿಮಟ್ಟಿ ಅವರು ಆಧುನಿಕ ಹೂಡಿಕೆ ಅವಕಾಶಗಳ ಕುರಿತು ಮಾಹಿತಿ ನೀಡಲಿದ್ದಾರೆ.
ಮಣಿಪಾಲ್‌ಸಿಗ್ನಾ ಹೆಲ್ತ್ ಇನ್ಶೂರೆನ್ಸ್ ಕಂಪನಿಯ ಪ್ರಾದೇಶಿಕ ತರಬೇತಿ ವ್ಯವಸ್ಥಾಪಕ ಶ್ರೀಕೃಷ್ಣ ಕುಮಾರ್ ಆರೋಗ್ಯ ವಿಮೆಯ ಮಹತ್ವವನ್ನು ವಿವರಿಸಲಿದ್ದಾರೆ. ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತೆ ಸಹನಾ ಬಾಳಕಲ್ ಅವರು ಹೂಡಿಕೆ ನಿರ್ಧಾರಗಳಲ್ಲಿ ಮಹಿಳೆಯರ ಪಾತ್ರದ ಕುರಿತು ಮಾತನಾಡಲಿದ್ದಾರೆ.
ಹಣಕಾಸಿನ ಯೋಜನೆ ರೂಪಿಸುವುದು, ಸೂಕ್ತ ಹೂಡಿಕೆ ಆಯ್ಕೆಗಳನ್ನು ಗುರುತಿಸುವುದು, ಆರೋಗ್ಯ ವಿಮೆಯ ಅಗತ್ಯ ಅರಿಯುವುದು ಮತ್ತು ಕುಟುಂಬದ ಆರ್ಥಿಕ ಭದ್ರತೆಯನ್ನು ಬಲಪಡಿಸುವ ಕುರಿತು ಕಾರ್ಯಾಗಾರದಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ.
ವಿಶೇಷವಾಗಿ ಮಹಿಳೆಯರು ಕುಟುಂಬದ ಹಣಕಾಸಿನ ನಿರ್ಧಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಉತ್ತೇಜಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಇದೇ ಸಂದರ್ಭದಲ್ಲಿ ಸಮಾಜದಲ್ಲಿ ಮಹಿಳಾ ಉದ್ಯಮಿಗಳು ಸಲ್ಲಿಸಿರುವ ಕೊಡುಗೆ ಮತ್ತು ಸಾಧನೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಗುವುದು.
ಉಳಿತಾಯವನ್ನು ಸೂಕ್ತವಾಗಿ ಹೂಡಿಕೆ ಮಾಡುವ ಮೂಲಕ ದೀರ್ಘಕಾಲೀನ ಆರ್ಥಿಕ ಗುರಿಗಳನ್ನು ಸಾಧಿಸಲು ಸಾರ್ವಜನಿಕರಿಗೆ ನೆರವಾಗುವ ಪ್ರಯತ್ನ ಇದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸಾರ್ವಜನಿಕರು ಕಾರ್ಯಾಗಾರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆಯುವಂತೆ ಜಸ್ಟ್ ಕ್ಯಾಬ್ಸ್ ಸಂಸ್ಥಾಪಕ ಸತೀಶ್ ಹೆಬ್ಬಾರ್ ಹಾಗೂ ಅಶ್ವಿನಿ ಹೆಗಡೆ ಅಂಡ್ ಅಸೋಸಿಯೇಟ್ಸ್ ಸಂಸ್ಥಾಪಕಿ, ಸಿಎ ಅಶ್ವಿನಿ ಹೆಗಡೆ ಮನವಿ ಮಾಡಿದ್ದಾರೆ.


