Friday, October 23, 2026
HomeNationalಎಸ್‌ಬಿಐ ಗ್ರಾಹಕರ ಮಾಹಿತಿ ಸೋರಿಕೆ!

ಎಸ್‌ಬಿಐ ಗ್ರಾಹಕರ ಮಾಹಿತಿ ಸೋರಿಕೆ!

ಡಾರ್ಕ್ ವೆಬ್‌ನಲ್ಲಿ 3,897 ದಾಖಲೆ ಪತ್ತೆ, ಭದ್ರತಾ ಲೋಪದ ಬಗ್ಗೆ ತನಿಖೆ

ನವದೆಹಲಿ: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿರುವ ಘಟನೆ ಸೈಬರ್ ಭದ್ರತೆಯ ಬಗ್ಗೆ ಆತಂಕ ಮೂಡಿಸಿದೆ.ಗ್ರಾಹಕರ ವೈಯಕ್ತಿಕ ವಿವರಗಳನ್ನು ಒಳಗೊಂಡ 3,897 ದಾಖಲೆಗಳು ಡಾರ್ಕ್ ವೆಬ್‌ನಲ್ಲಿ ಪತ್ತೆಯಾಗಿವೆ ಎಂದು ವರದಿಯಾಗಿದೆ.

ಈ ಮಾಹಿತಿ ಹೇಗೆ ಸೋರಿಕೆಯಾಯಿತು, ಇದಕ್ಕೆ ಕಾರಣವೇನು ಮತ್ತು ಇದರಿಂದ ಗ್ರಾಹಕರಿಗೆ ಯಾವ ರೀತಿಯ ತೊಂದರೆ ಎದುರಾಗಬಹುದು ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.

ಅಕ್ಟೋಬರ್ 16ರಂದು ಗ್ರಾಹಕರ ಮಾಹಿತಿ ಡಾರ್ಕ್ ವೆಬ್‌ನಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಎಚ್ಚರಿಕೆ ಲಭಿಸಿದ ಬಳಿಕ ಎಸ್‌ಬಿಐ ಪರಿಶೀಲನೆ ಆರಂಭಿಸಿದೆ. ಪ್ರಾಥಮಿಕ ಪರಿಶೀಲನೆಯಲ್ಲಿ ಗ್ರಾಹಕರ ಹೆಸರು, ಲಿಂಗ, ಜನ್ಮದಿನಾಂಕ, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಮತ್ತು ವಾಸದ ವಿಳಾಸದಂತಹ ವೈಯಕ್ತಿಕ ವಿವರಗಳು ಪತ್ತೆಯಾಗಿವೆ.

ಬ್ಯಾಂಕ್ ಶಾಖೆಗಳ ಮಾಹಿತಿ, ಗ್ರಾಹಕರ ಮಾಹಿತಿ ಕಡತದ ಗುರುತಿನ ಸಂಖ್ಯೆ, ಲೀಡ್ ಐಡಿಗಳು ಹಾಗೂ ಸಾಲದ ಅರ್ಜಿಗಳಿಗೆ ಸಂಬಂಧಿಸಿದ ಕೆಲವು ವಿವರಗಳೂ ದಾಖಲೆಗಳಲ್ಲಿವೆ ಎಂದು ವರದಿಗಳು ತಿಳಿಸಿವೆ. ‘Siriusim’ ಎಂಬ ಹೆಸರಿನ ಹ್ಯಾಕರ್ ಗುಂಪು ಎಸ್‌ಬಿಐಗೆ ಸಂಬಂಧಿಸಿದ ಸುಮಾರು 3.75 ಲಕ್ಷ ದಾಖಲೆಗಳು ಮತ್ತು 2,722 ಪಿಡಿಎಫ್ ಕಡತಗಳು ತಮ್ಮ ಬಳಿ ಇರುವುದಾಗಿ ಹೇಳಿಕೊಂಡಿದೆ.

ಆದರೆ, ಈ ಗುಂಪು ಹೇಳಿಕೊಂಡಿರುವ ಎಲ್ಲ ದಾಖಲೆಗಳ ನೈಜತೆ ಮತ್ತು ಅವುಗಳಲ್ಲಿ ಎಷ್ಟು ಗ್ರಾಹಕರ ಮಾಹಿತಿ ಇದೆ ಎಂಬುದು ಇನ್ನೂ ಸಂಪೂರ್ಣವಾಗಿ ದೃಢಪಟ್ಟಿಲ್ಲ. ಬ್ಯಾಂಕ್‌ನ ಪ್ರಾಥಮಿಕ ಪರಿಶೀಲನೆಯಲ್ಲಿ 3,897 ದಾಖಲೆಗಳು ಸೋರಿಕೆಯಾದ ಬಗ್ಗೆ ವರದಿಯಾಗಿದೆ. ಪತ್ತೆಯಾದ 3,897 ದಾಖಲೆಗಳನ್ನೇ ಸೋರಿಕೆಯಾದ ಒಟ್ಟು ಮಾಹಿತಿಯ ಅಂತಿಮ ಪ್ರಮಾಣವೆಂದು ಪರಿಗಣಿಸುವಂತಿಲ್ಲ.

ಪ್ರಕರಣದ ಮೂಲ ಮತ್ತು ವ್ಯಾಪ್ತಿಯನ್ನು ಪತ್ತೆಹಚ್ಚಲು ಸೈಬರ್ ಭದ್ರತಾ ತಜ್ಞರ ನೆರವು ಪಡೆಯಲಾಗಿದೆ. ಗ್ರಾಹಕರ ಮಾಹಿತಿ ಸೋರಿಕೆಯಾಗಲು ಬ್ಯಾಂಕಿನ ವ್ಯವಸ್ಥೆಯಲ್ಲಿನ ಭದ್ರತಾ ಲೋಪವೇ ಕಾರಣವೇ ಅಥವಾ ಬೇರೆ ಮಾರ್ಗದಿಂದ ಮಾಹಿತಿ ಹೊರಹೋಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಬ್ಯಾಂಕ್‌ಗಳು ಸಾಲದ ಅರ್ಜಿಗಳ ನಿರ್ವಹಣೆ, ಗ್ರಾಹಕರ ಸಂಪರ್ಕ ಮತ್ತು ಡಿಜಿಟಲ್ ಸೇವೆಗಳಿಗಾಗಿ ಹೊರಗಿನ ತಂತ್ರಜ್ಞಾನ ಸಂಸ್ಥೆಗಳ ನೆರವು ಪಡೆಯುತ್ತವೆ.ಇಂತಹ ಸಂಸ್ಥೆಗಳ ಸರ್ವರ್‌ಗಳಲ್ಲಿ ಭದ್ರತಾ ಲೋಪ ಉಂಟಾದರೆ ಮಾಹಿತಿ ಸೋರಿಕೆಯಾಗುವ ಅಪಾಯವಿರುತ್ತದೆ. ಕಂಪ್ಯೂಟರ್ ವ್ಯವಸ್ಥೆಗೆ ಪ್ರವೇಶ ಪಡೆಯುವ ರಹಸ್ಯ ಸಂಕೇತಗಳು ಕಳವಾಗುವುದು, ಸಾಫ್ಟ್‌ವೇರ್‌ನಲ್ಲಿನ ದೋಷಗಳು, ಮಾಹಿತಿ ಸಂಗ್ರಹಿಸುವ ಸರ್ವರ್‌ಗಳಲ್ಲಿನ ತಪ್ಪಾದ ಭದ್ರತಾ ವ್ಯವಸ್ಥೆ ಹಾಗೂ ಅನಧಿಕೃತ ಪ್ರವೇಶವೂ ಇಂತಹ ಘಟನೆಗಳಿಗೆ ಕಾರಣವಾಗುತ್ತವೆ.

ಆದರೆ, ಎಸ್‌ಬಿಐ ಪ್ರಕರಣದಲ್ಲಿ ಇವುಗಳಲ್ಲಿ ಯಾವುದಾದರೂ ಕಾರಣವಾಗಿದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ತನಿಖೆಯ ವರದಿ ಹೊರಬಂದ ಬಳಿಕವೇ ನಿಖರ ಕಾರಣ ತಿಳಿಯಲಿದೆ.ಬ್ಯಾಂಕಿನ ಪ್ರಮುಖ ಹಣಕಾಸು ವ್ಯವಹಾರಗಳಿಗೆ ಈ ಘಟನೆಯಿಂದ ತೊಂದರೆಯಾಗಿಲ್ಲ ಎಂದು ವರದಿಯಾಗಿದೆ.

ಎಟಿಎಂ ಪಿನ್, ನೆಟ್‌ಬ್ಯಾಂಕಿಂಗ್ ಪಾಸ್‌ವರ್ಡ್ ಮತ್ತು ಒಟಿಪಿ ಸೋರಿಕೆಯಾಗಿವೆ ಎಂಬುದಕ್ಕೂ ಸದ್ಯಕ್ಕೆ ದೃಢೀಕರಣವಿಲ್ಲ. ಆದರೂ ವೈಯಕ್ತಿಕ ಮಾಹಿತಿ ಸೋರಿಕೆಯನ್ನು ನಿರ್ಲಕ್ಷಿಸುವಂತಿಲ್ಲ. ಗ್ರಾಹಕರ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ ಮತ್ತು ಸಾಲದ ವಿವರಗಳನ್ನು ಬಳಸಿಕೊಂಡು ವಂಚಕರು ಬ್ಯಾಂಕ್ ಅಧಿಕಾರಿಗಳಂತೆ ಕರೆ ಮಾಡಬಹುದು.

ಕೆವೈಸಿ ನವೀಕರಣ, ಸಾಲ ಮಂಜೂರಾತಿ ಅಥವಾ ಖಾತೆಯ ಭದ್ರತೆಯ ಹೆಸರಿನಲ್ಲಿ ಗೌಪ್ಯ ಮಾಹಿತಿ ಪಡೆಯಲು ಪ್ರಯತ್ನಿಸಬಹುದು. ಗ್ರಾಹಕರ ನೈಜ ವಿವರಗಳನ್ನು ಹೇಳಿ ನಂಬಿಕೆ ಹುಟ್ಟಿಸುವುದೂ ಇಂತಹ ವಂಚನೆಗಳ ಸಾಮಾನ್ಯ ತಂತ್ರವಾಗಿದೆ.

ಆದ್ದರಿಂದ ಬ್ಯಾಂಕ್ ಅಧಿಕಾರಿಗಳೆಂದು ಹೇಳಿಕೊಂಡು ಕರೆ ಮಾಡುವವರಿಗೆ ಒಟಿಪಿ, ಎಟಿಎಂ ಪಿನ್ ಅಥವಾ ಪಾಸ್‌ವರ್ಡ್ ನೀಡಬಾರದು. ಕೆವೈಸಿ ನವೀಕರಣ ಅಥವಾ ಖಾತೆ ಸ್ಥಗಿತದ ಹೆಸರಿನಲ್ಲಿ ಬರುವ ಅಪರಿಚಿತ ಲಿಂಕ್‌ಗಳನ್ನು ತೆರೆಯಬಾರದು. ಅಪರಿಚಿತರು ಕಳುಹಿಸುವ ಆ್ಯಪ್‌ಗಳನ್ನು ಅಳವಡಿಸಿಕೊಳ್ಳಬಾರದು. ಮೊಬೈಲ್‌ನ್ನು ದೂರದಿಂದ ನಿಯಂತ್ರಿಸಲು ಯಾರಿಗೂ ಅನುಮತಿ ನೀಡಬಾರದು.

ಬ್ಯಾಂಕ್ ಖಾತೆಯ ವಹಿವಾಟುಗಳನ್ನು ನಿಯಮಿತವಾಗಿ ಪರಿಶೀಲಿಸಿ, ಅನುಮಾನಾಸ್ಪದ ವ್ಯವಹಾರ ಕಂಡುಬಂದರೆ ತಕ್ಷಣ ಬ್ಯಾಂಕ್‌ಗೆ ತಿಳಿಸಬೇಕು.ಸೈಬರ್ ವಂಚನೆಗೆ ಒಳಗಾದರೆ ವಿಳಂಬ ಮಾಡದೆ ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ 1930ಕ್ಕೆ ಕರೆ ಮಾಡಬೇಕು ಅಥವಾ cybercrime.gov.in ಮೂಲಕ ದೂರು ದಾಖಲಿಸಬೇಕು.

ವಂಚನೆ ನಡೆದ ತಕ್ಷಣ ದೂರು ನೀಡುವುದರಿಂದ ಹಣದ ವರ್ಗಾವಣೆಯನ್ನು ತಡೆಯುವ ಅಥವಾ ಹಣವನ್ನು ಮರಳಿ ಪಡೆಯುವ ಪ್ರಯತ್ನಕ್ಕೆ ನೆರವಾಗುತ್ತದೆ.ಎಸ್‌ಬಿಐನ ಈ ಪ್ರಕರಣವು ಗ್ರಾಹಕರ ವೈಯಕ್ತಿಕ ಮಾಹಿತಿಯ ಸುರಕ್ಷತೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ.

ಬ್ಯಾಂಕ್‌ಗಳ ಹೊಣೆಗಾರಿಕೆ ಹಣಕಾಸು ವ್ಯವಹಾರಗಳನ್ನು ಸುರಕ್ಷಿತವಾಗಿಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಗ್ರಾಹಕರ ಮಾಹಿತಿಯನ್ನೂ ರಕ್ಷಿಸಬೇಕು. ಮಾಹಿತಿ ಸೋರಿಕೆಯ ಮೂಲವನ್ನು ಪತ್ತೆಹಚ್ಚಿ, ಇಂತಹ ಘಟನೆಗಳು ಮರುಕಳಿಸದಂತೆ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವುದು ಅಗತ್ಯ. ಇದರ ಜೊತೆಗೆ ಗ್ರಾಹಕರು ಕೂಡ ಎಚ್ಚರಿಕೆಯಿಂದಿರಬೇಕು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share