ಸಿದ್ದಾಪುರ: ದಸರಾ ಹಬ್ಬದಂದು ಊರಿನ ದೇವಸ್ಥಾನದ ಮೆರವಣಿಗೆ ನೋಡಲು ತೆರಳಿದ್ದ ಕವಂಚೂರು ಗ್ರಾಮದ ಅಣ್ಣಪ್ಪ ಮಹಾಲೆ (64) ಮನೆ ಹಿಂಭಾಗದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಅ.21ರಂದು ರಾತ್ರಿ 8.30ರ ಸುಮಾರಿಗೆ ವೀರಭದ್ರೇಶ್ವರ ದೇವರ ಮೆರವಣಿಗೆ ನೋಡಿಕೊಂಡು ಬರುವುದಾಗಿ ಹೇಳಿ ಅಣ್ಣಪ್ಪ ಮನೆಯಿಂದ ತೆರಳಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಗ್ರಾಮದ ಗೂಡಂಗಡಿ ಬಳಿ ಮಂಜುನಾಥ ಹರಿಜನ ಎಂಬುವವರಿಗೆ ಅವರು ಸಿಕ್ಕಿದ್ದರು ಎನ್ನಲಾಗಿದೆ.
ರಾತ್ರಿ 9.20 ಆದರೂ ತಂದೆ ಮನೆಗೆ ಮರಳದ ಹಿನ್ನೆಲೆಯಲ್ಲಿ ಮಗ ಗಣೇಶ ಮಹಾಲೆ (37) ಅವರನ್ನು ಹುಡುಕಿಕೊಂಡು ದೇವಸ್ಥಾನದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಮೆರವಣಿಗೆ ಮುಗಿದಿರುವುದಾಗಿ ಗ್ರಾಮಸ್ಥರು ತಿಳಿಸಿದ್ದರು.
ಬಳಿಕ ತಂದೆ ಸಾಮಾನ್ಯವಾಗಿ ಮನೆಗೆ ಬರುತ್ತಿದ್ದ ಹಿಂಬದಿಯ ದಾರಿಯಲ್ಲಿ ಹುಡುಕಿಕೊಂಡು ಹೋದಾಗ, ಮನೆಯ ಹಿಂಭಾಗದ ಕಂಬದ ಬಳಿ ಅಣ್ಣಪ್ಪ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರಾತ್ರಿ 9.30ರ ಸುಮಾರಿಗೆ ಗಣೇಶ ಅವರು ತಾಯಿ ಹಾಗೂ ಇತರರಿಗೆ ವಿಷಯ ತಿಳಿಸಿದ್ದಾರೆ.
ಅಣ್ಣಪ್ಪ ಅವರು ಕೂಲಿ ಕೆಲಸ ಮುಗಿಸಿ ಮನೆಗೆ ಬಂದ ಬಳಿಕ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೆರವಣಿಗೆ ನೋಡಿ ಮನೆಗೆ ವಾಪಸಾಗುವ ವೇಳೆ ಆರೋಗ್ಯದಲ್ಲಿ ಏರುಪೇರಾಗಿ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಸಾವಿನ ನಿಖರ ಕಾರಣ ತಿಳಿಯಲು ವೈದ್ಯಕೀಯ ಪರೀಕ್ಷೆ ನಡೆಸುವಂತೆ ಮಗ ಗಣೇಶ ಮಹಾಲೆ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


