ಶಿರಸಿ: ತಾನು ಸ್ವಜಾತಿ ನಾಯಕರಿಂದಲೇ ಅನ್ಯಾಯ, ಕಿರುಕುಳ ಎದುರಿಸಿದ್ದೇನೆ. ಚುನಾವಣೆಯಲ್ಲಿ ತಾನು ಸ್ಪರ್ಧಿಸಿದ್ದ ಪಕ್ಷದ ಕೆಲ ಮುಖಂಡರೇ ತನ್ನನ್ನು ಸೋಲಿಸಲು ಹಗಲು-ರಾತ್ರಿ ಶ್ರಮಿಸಿದ್ದಾರೆ ಎಂದು ಶಾಸಕ ಶಿವರಾಮ ಹೆಬ್ಬಾರ್ ನೀಡಿರುವ ಹೇಳಿಕೆ ಪಕ್ಷದೊಳಗಿನ ಭಿನ್ನಮತದ ಚರ್ಚೆಗೆ ಮತ್ತಷ್ಟು ಕಾವು ನೀಡಿದೆ.
ಶಿರಸಿಯಲ್ಲಿ ಖಾಸಗಿ ಸುದ್ದಿ ಮಾಧ್ಯಮವೊಂದರೊಂದಿಗೆ ಮಾತನಾಡಿದ ಅವರು, ಯಾರೂ ವಿನಾಕಾರಣ ರಾಜಕೀಯ ಪಕ್ಷದಿಂದ ದೂರ ಸರಿಯುವುದಿಲ್ಲ. ಪಕ್ಷದಿಂದ ಅಂತರ ಕಾಯ್ದುಕೊಳ್ಳಲು ಪ್ರಮುಖ ಕಾರಣಗಳಿರುತ್ತವೆ ಎಂದಿದ್ದಾರೆ.
ತಮ್ಮದೇ ಜಿಲ್ಲೆಯಲ್ಲಿ ಸ್ವಜಾತಿ ನಾಯಕರಿಂದ ತೀವ್ರ ಅನ್ಯಾಯ ಮತ್ತು ಕಿರುಕುಳ ಎದುರಿಸಿದ್ದೇನೆ ಎಂದು ಹೆಬ್ಬಾರ್ ಆರೋಪಿಸಿದರು. ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಎದುರಾದ ಸಮಸ್ಯೆಗಳು ತಮಗೆ ಚೆನ್ನಾಗಿ ತಿಳಿದಿವೆ. ಹಾಗೆಯೇ ತಮಗಾದ ನೋವುಗಳೂ ಅವರಿಗೆ ಗೊತ್ತಿವೆ ಎಂದಿದ್ದಾರೆ.
2028ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮನ್ನು ಬಿಜೆಪಿಗೆ ಮರಳುವಂತೆ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ತಾವು ಬ್ರಾಹ್ಮಣ ಸಮಾಜದಿಂದ ಗೆದ್ದು ಬಂದರೆ ಮಂತ್ರಿ ಸ್ಥಾನ ಅಥವಾ ಪ್ರಮುಖ ಹುದ್ದೆ ಸಿಗಬಹುದು. ಇದರಿಂದ ತಮ್ಮ ಸ್ವಜಾತಿ ನಾಯಕರಿಗೆ ಸಿಗಬೇಕಾದ ಮಂತ್ರಿ ಸ್ಥಾನ ತಪ್ಪಬಹುದು ಎಂಬ ಸಂಕುಚಿತ ಮನೋಭಾವದಿಂದಲೇ ಕೆಲವರು ತಮ್ಮ ಸೋಲಿಗೆ ಸಂಚು ರೂಪಿಸಿದ್ದರು. ತಮ್ಮನ್ನು ಸೋಲಿಸಲು ಪ್ರಯತ್ನಿಸಿದವರು ಈಗ ಪಶ್ಚಾತ್ತಾಪ ಪಡುವ ಪರಿಸ್ಥಿತಿ ಬಂದಿದೆ ಎಂದವರು ತಿರುಗೇಟು ನೀಡಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಲು ಪಕ್ಷದೊಳಗಿನ ಅಧಿಕಾರದ ಆಸೆ ಮತ್ತು ಅನುಭವದ ಕೊರತೆಯೂ ಕಾರಣ ಎಂದರಲ್ಲದೆ, ಪಕ್ಷದಿಂದ ದೂರ ಉಳಿದಿರುವ ತಮ್ಮ ನಿಲುವಿನ ಹಿಂದೆ ವೈಯಕ್ತಿಕ ಕಾರಣಗಳಿವೆ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯೊಳಗಿನ ನಾಯಕರ ನಡುವಿನ ಭಿನ್ನಾಭಿಪ್ರಾಯ, ಜಿಲ್ಲಾಮಟ್ಟದ ಸಂಘಟನೆಯ ಕಾರ್ಯವೈಖರಿ ಮತ್ತು ತಮ್ಮನ್ನು ಸೋಲಿಸಲು ಸಂಚು ನಡೆದಿತ್ತು ಎಂಬ ಹೆಬ್ಬಾರ್ ಅವರ ಆರೋಪಗಳು ಈಗ ರಾಜಕೀಯ ಚರ್ಚೆಗೆ ದೊಡ್ಡ ಗ್ರಾಸವಾಗಿವೆ.


