ಕುಮಟಾ: ಪ್ರತಿದಿನ ಮೇವು ಅರಸಿ ಗುಡ್ಡದತ್ತ ಹೋಗಿ ಸಂಜೆ ಕೊಟ್ಟಿಗೆಗೆ ಮರಳುತ್ತಿದ್ದ ಜಾನುವಾರುಗಳು ಅಂದು ಮನೆಗೆ ಬರಲೇ ಇಲ್ಲ. ಎಂದಿನಂತೆ ಕಾಯುತ್ತಿದ್ದ ಮಾಲಕರು ಮರುದಿನ ಹುಡುಕಿಕೊಂಡು ಹೋದಾಗ ಕಂಡದ್ದು ಜೀವ ಕಳೆದುಕೊಂಡ ತಮ್ಮ ಪ್ರೀತಿಯ ಮೂಕಪ್ರಾಣಿಗಳನ್ನು.
ತಾಲೂಕಿನ ಅಂತ್ರವಳ್ಳಿಯಲ್ಲಿ ಸಿಡಿಲು ಬಡಿದು ಏಳು ಜಾನುವಾರುಗಳು ಸಾವನ್ನಪ್ಪಿದ್ದು, ಅವುಗಳನ್ನು ಸಾಕಿದ್ದ ಕುಟುಂಬಗಳಿಗೆ ಆಘಾತ ಉಂಟುಮಾಡಿದೆ.
ಅಂತ್ರವಳ್ಳಿಯ ಕೃಷ್ಣ ತುಳಸು ಗೌಡ ಅವರು ಹೈನುಗಾರಿಕೆಯನ್ನೇ ಜೀವನಾಧಾರವಾಗಿಸಿಕೊಂಡಿದ್ದರು. ಗಂಗಾಧರ ಸುಗ್ಗಿ ಗೌಡ ಹಾಗೂ ಬೇಡು ನಾಗು ಗೌಡ ಅವರೂ ನಿತ್ಯದ ಹಾಲಿನ ಬಳಕೆಗಾಗಿ ಹಸುಗಳನ್ನು ಸಾಕುತ್ತಿದ್ದರು. ಪ್ರತಿ ದಿನ ಜಾನುವಾರುಗಳನ್ನು ಆರೈಕೆ ಮಾಡುತ್ತಾ, ಅವುಗಳಿಂದಲೇ ಬದುಕಿನ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದ ಈ ಕುಟುಂಬಗಳಿಗೆ ಬದುಕಿನ ಭಾಗವಾಗಿದ್ದವು.
ಶುಕ್ರವಾರ ಎಂದಿನಂತೆ ಮೇವು ಅರಸಿ ಕಾಡಿನತ್ತ ತೆರಳಿದ್ದ ಜಾನುವಾರುಗಳು ಸಂಜೆಯಾದರೂ ಕೊಟ್ಟಿಗೆಗೆ ಮರಳಲಿಲ್ಲ. ಶನಿವಾರ ಅವುಗಳನ್ನು ಹುಡುಕಿಕೊಂಡು ಹೋದಾಗ ಗುಡ್ಡದ ತಪ್ಪಲಿನಲ್ಲಿ ಏಳು ಜಾನುವಾರುಗಳು ಸಾಲಾಗಿ ಬಿದ್ದಿರುವುದು ಕಂಡುಬಂದಿದೆ. ಸಿಡಿಲಿನ ಹೊಡೆತಕ್ಕೆ ಅವು ಸ್ಥಳದಲ್ಲೇ ಮೃತಪಟ್ಟಿದ್ದವು.
ಹಾಲು ಕರೆಯುತ್ತಿದ್ದ ಮೂರು ಆಕಳು, ಒಂದು ಕರು ಹಾಗೂ ಎರಡು ಗೂಳಿ ಸೇರಿದಂತೆ ಒಟ್ಟು ಏಳು ಜಾನುವಾರುಗಳು ಸಾವನ್ನಪ್ಪಿವೆ. ಪ್ರತಿದಿನ ಕಣ್ಣೆದುರೇ ಓಡಾಡುತ್ತಿದ್ದ, ತಮ್ಮ ಬದುಕಿಗೆ ಆಸರೆಯಾಗಿದ್ದ ಮೂಕಪ್ರಾಣಿಗಳನ್ನು ಕಳೆದುಕೊಂಡ ಮಾಲಕರ ದುಃಖ ಹೇಳತೀರದಾಗಿದೆ. ಅದರಲ್ಲೂ ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದ ಕುಟುಂಬಗಳಿಗೆ ಈ ನಷ್ಟ ಆರ್ಥಿಕವಾಗಿಯೂ ದೊಡ್ಡ ಹೊಡೆತ ನೀಡಿದೆ.
ಘಟನೆಯ ಮಾಹಿತಿ ತಿಳಿದು ಕುಮಟಾದ ಪಶುವೈದ್ಯಾಧಿಕಾರಿ ವಿ.ಕೆ. ಹೆಗಡೆ ಅವರು ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಿ, ಸಿಡಿಲು ಬಡಿದ ಪರಿಣಾಮ ಅವು ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ.


