ಯಲ್ಲಾಪುರ: ನಮ್ಮ ಜಿಲ್ಲೆಯ ಶಿರಸಿ, ಯಲ್ಲಾಪುರ ಭಾಗದಲ್ಲಿ ಬೀಳುವ ಭಾರೀ ಮಳೆಯ ನೀರನ್ನು ಸುಮಾರು 10 ಸಾವಿರ ಕೋಟಿ ರೂ.ವೆಚ್ಚದಲ್ಲಿ ಡ್ಯಾಮ್ ಹಾಗೂ ಸುರಂಗ ಕಾಲುವೆಗಳನ್ನು ಕಟ್ಟಿಸಿ, ಪಕ್ಕದ ಗದಗ, ರಾಯಚೂರು, ಕೊಪ್ಪಳ ಜಿಲ್ಲೆಗಳಿಗೆ ಹಾಯಿಸುವ ಬೇಡ್ತಿ ವರದಾ ಹಾಗೂ ಅಘನಾಶಿನಿ ವೇದಾವತಿ ನದಿ ಜೋಡಣೆಯ ಅವೈಜ್ಞಾನಿಕ ಯೋಜನೆಯನ್ನು ನಾವೆಲ್ಲರೂ ವಿರೋಧಿಸಬೇಕಿದೆ ಎಂದು ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಅನಗತ್ಯ ಪರಿಸರ ನಾಶ, ಮಳೆಯ ಕೊರತೆ, ಬರಗಾಲ ಇತ್ಯಾದಿ ಕಾರಣಗಳಿಂದ ಬೇಡ್ತಿ ಹಳ್ಳದಲ್ಲಿ ನೀರಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಹೀಗಿರುವಾಗ, ಹೊಸದಾಗಿ ಅಧ್ಯಯನ ಮಾಡದೇ, ಚರ್ಚೆ ಮಾಡದೇ, ಜಿಲ್ಲೆಯ ಧಾರಣಾ ಶಕ್ತಿಯ ಪರಿಶೀಲನೆ ಮಾಡದೇ, ಏಕಾಏಕಿ ನಲ್ವತ್ತು ವರ್ಷಗಳ ಹಿಂದಿನ ನೀರಿನ ಪ್ರಮಾಣವನ್ನು ಆಧರಿಸಿ ಈಗ ಯೋಜನೆಗೆ ಕೈ ಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಈ ಅವಾಸ್ತವಿಕ ಯೋಜನೆ ಜಾರಿಗೆ ಬಂದರೆ, ಪಕ್ಕದ ಜಿಲ್ಲೆಯವರಿಗೆ ಬಿಡಿ, ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಯೂ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಜೊತೆಗೆ ಈ ಯೋಜನೆಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ಅರಣ್ಯ ನಾಶವಾಗಿ ಅಲ್ಲೆಲ್ಲಾ ಕಾಂಕ್ರೀಟ್ ಕಾಲುವೆಗಳು ನಿರ್ಮಾಣ ಆಗುವುದರಿಂದ, ಸಹಜವಾಗಿ ಕಾಡಿನಲ್ಲಿ ಇರಬೇಕಾದ ಪ್ರಾಣಿಗಳು ಹತ್ತಿರದ ನಮ್ಮ ಹಳ್ಳಿ ಪಟ್ಟಣಗಳಿಗೆ ನುಗ್ಗುವುದರಿಂದ ನಮ್ಮ ಬದುಕು ಇನ್ನಷ್ಟು ದುಸ್ತರವಾಗಲಿದೆ.
ಇದಕ್ಕಾಗಿ ಸಮಸ್ತ ಉತ್ತರ ಕನ್ನಡ ಜಿಲ್ಲೆಯ ಪ್ರಜ್ಞಾವಂತ ಜನತೆ ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಪೂಜ್ಯ ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ಕಳೆದ ಅನೇಕ ತಿಂಗಳುಗಳಿಂದ ಜಿಲ್ಲೆಯಿಂದ ರಾಜಧಾನಿಯವರೆಗೆ ಹೋರಾಟ, ಮನವಿ, ಜನಜಾಗೃತಿ ಸಭೆಗಳು ನಡೆಯುತ್ತಿವೆ. ಇದರ ಮುಂದುವರೆದ ಭಾಗವಾಗಿ, ಇದೇ ನವೆಂಬರ್ 3ರ (ಮಂಗಳವಾರ) ಬೆಳಿಗ್ಗೆ 10 ಗಂಟೆಯಿಂದ ಯಲ್ಲಾಪುರ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ, ಸರಕಾರಕ್ಕೆ ನಮ್ಮ ಪ್ರತಿಭಟನೆಯ ಬಿಸಿ ಮುಟ್ಟಿಸಲು ನಿರ್ಧರಿಸಲಾಗಿದೆ.
ಯಲ್ಲಾಪುರ ಪಟ್ಟಣದ ಎಲ್ಲ ಸಾರ್ವಜನಿಕ ಬಂಧುಗಳೂ ಸಹ ಪಕ್ಷಾತೀತವಾಗಿ, ಧರ್ಮಾತೀತವಾಗಿ, ನಮ್ಮ ಬದುಕುವ ಹಕ್ಕಿಗಾಗಿ ನಡೆಯಲಿರುವ ಈ ಹೋರಾಟದಲ್ಲಿ ಸಕ್ರೀಯವಾಗಿ ಭಾಗವಹಿಸಬೇಕೆಂದು ಅವರು ಕೋರಿದ್ದಾರೆ.


