ಶಿರಸಿ: ಬೇಡ್ತಿ–ವರದಾ–ಅಘನಾಶಿನಿ ನದಿ ಜೋಡಣೆ ಯೋಜನೆ ವಿರೋಧಿಸಿ ನವೆಂಬರ್ 3ರಂದು ಯಲ್ಲಾಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟ ಶಾಂತಿಯುತವಾಗಿ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ನಡೆಯಬೇಕು. ಅದೇ ವೇಳೆ ಹೋರಾಟದ ತೀವ್ರತೆ ಕಡಿಮೆಯಾಗದಂತೆ, ಗಟ್ಟಿ ಧ್ವನಿ ಮೊಳಗಿಸಬೇಕು ಎಂದು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕರೆ ನೀಡಿದರು.
ಶ್ರೀಮಠದಲ್ಲಿ ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆ ಸಂಚಾಲನಾ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ನದಿ ಜೋಡಣೆ ಯೋಜನೆಯ ಕುರಿತು ಜಿಲ್ಲೆಯ ಜನರ ಆತಂಕ ಹಾಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಗಳು ನಡೆಯಬೇಕು. ಈ ನಿಟ್ಟಿನಲ್ಲಿ ಕೊಳ್ಳ ಸಂರಕ್ಷಣಾ ಸಮಿತಿ ಮತ್ತು ಹೆದ್ದಾರಿ ತಡೆ ಸಂಚಾಲನಾ ಸಮಿತಿಯ ಪದಾಧಿಕಾರಿಗಳಿಗೆ ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಅವಕಾಶವನ್ನು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಕಲ್ಪಿಸಿಕೊಡಬೇಕು ಎಂದು ಶ್ರೀಗಳು ಹೇಳಿದರು.
ನದಿಗಳ ಸಂರಕ್ಷಣೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಿತದೃಷ್ಟಿಯಿಂದ ಜನಜಾಗೃತಿ ಮೂಡಿಸುವುದೂ ಅಗತ್ಯವಾಗಿದೆ. ಗಂಗಾಷ್ಟಮಿಯಿಂದ ಒಂದು ವಾರದವರೆಗೆ ಸಾಧ್ಯವಿರುವ ಎಲ್ಲೆಡೆ ಗಂಗಾರತಿ ಹಾಗೂ ನದಿಗಳ ಪೂಜೆಯನ್ನು ವ್ಯಾಪಕವಾಗಿ ಆಯೋಜಿಸಿ, ನದಿಗಳ ಉಳಿವಿಗಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಶ್ರೀಮಠದ ಕಾರ್ಯಾಧ್ಯಕ್ಷ ಸತೀಶ ಹೆಗಡೆ ಹುಳಗೋಳ, ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ರಸ್ತೆ ತಡೆ ಸಂಚಾಲನಾ ಸಮಿತಿ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ, ವಿಶ್ವನಾಥ ಶಿಗೇಹಳ್ಳಿ, ಎನ್.ಜಿ. ಹೆಗಡೆ ಭಟ್ರಕೇರಿ, ಅನಂತ ಹೆಗಡೆ ಹುಳಗೋಳ, ಎಂ.ಕೆ. ಭಟ್ ಯಡಳ್ಳಿ, ನರಸಿಂಹ ಸಾತೊಡ್ಡಿ, ವಿ.ಟಿ. ಹೆಗಡೆ ತೊಂಡೆಕೆರೆ, ವೆಂಕಟ್ರಮಣ ಭಟ್ ಕಿರಕುಂಭತ್ತಿ, ಕೇಶವ ಕೂರ್ಸೆ ಹಾಗೂ ನಾರಾಯಣ ಹೆಗಡೆ ಸುರಗಿಮನೆ ಉಪಸ್ಥಿತರಿದ್ದರು.
ಅನಂತ ಹೆಗಡೆ ಅಶೀಸರ ಪ್ರಾಸ್ತಾವಿಕವಾಗಿ ಮಾತನಾಡಿದರು. ನರಸಿಂಹ ಸಾತೊಡ್ಡಿ ವಂದಿಸಿದರು.


