ಸಿದ್ದಾಪುರ: ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಬದಲು ಪರಸ್ಪರ ಬೆಸೆಯುವ ಕೆಲಸವಾಗಬೇಕು. ನಾವೆಲ್ಲರೂ ಒಂದು, ನಾವೆಲ್ಲರೂ ಬಂಧು ಎಂಬ ಭಾವನೆ ಸಮಾಜದ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಶಿರಳಗಿ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಹೇಳಿದರು.
ತಾಲೂಕಿನ ಕುಚಗುಂಡಿಯಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ 30 ದಿನಗಳ ಕಾಲ ಆಯೋಜಿಸಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡುತ್ತಿದ್ದರು.
ಇತರರಿಗೆ ಒಳ್ಳೆಯದಾಗಲಿ ಎಂದು ಬಯಸುವ ಮನಸ್ಸು ಬಹಳ ಮುಖ್ಯ. ಮತ್ತೊಬ್ಬರ ಯಶಸ್ಸನ್ನು ಕಂಡು ಸಂತೋಷಪಡುವವರು ವಿರಳ. ಆದರೆ ಇತರರ ಏಳಿಗೆಗೆ ಅಡ್ಡಿಯಾಗುವುದು ಧರ್ಮವಲ್ಲ. ಯಾವುದೇ ಅಪೇಕ್ಷೆಯಿಲ್ಲದೆ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಅನಂತಮೂರ್ತಿ ಹೆಗಡೆ ಅವರು ಮಾದರಿಯಾಗಿದ್ದಾರೆ. ಇಂತಹ ಕಾರ್ಯಗಳಿಂದ ಪ್ರೇರಣೆ ಪಡೆದು ದೇಶ ಕಟ್ಟುವ ಕೆಲಸದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ಕುಟುಂಬವನ್ನು ಒಗ್ಗಟ್ಟಿನಿಂದ ಮುನ್ನಡೆಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಮಹಿಳೆಯರು ಬಟ್ಟೆ ಹೊಲಿಯುವುದರ ಜತೆಗೆ ಕುಟುಂಬದ ಸದಸ್ಯರ ನಡುವಿನ ಬಾಂಧವ್ಯವನ್ನೂ ಬೆಸೆಯಬೇಕು. ಕುಟುಂಬದಲ್ಲಿ ಆತ್ಮೀಯತೆ ಇದ್ದರೆ ಸಂಕಷ್ಟದ ಸಂದರ್ಭದಲ್ಲಿಯೂ ಪರಸ್ಪರ ನೆರವಾಗಲು ಸಾಧ್ಯ. ಸಮಾಜದಲ್ಲಿ ಮಾನಸಿಕ ನೆಮ್ಮದಿ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಕುಟುಂಬದ ಮೌಲ್ಯಗಳನ್ನು ಉಳಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.
ಪತ್ರಕರ್ತ ಪ್ರವೀಣ ಹೆಗಡೆ ಕರ್ಜಗಿ ಮಾತನಾಡಿ, ಇಂದಿನ ಸಮಾಜಕ್ಕೆ ಅನಂತಮೂರ್ತಿ ಹೆಗಡೆ ಅವರಂತಹ ಸಮಾಜಮುಖಿ ವ್ಯಕ್ತಿಗಳ ಅಗತ್ಯವಿದೆ. ಹೊಲಿಗೆ ತರಬೇತಿಯಂತಹ ಕೌಶಲಾಧಾರಿತ ಕಾರ್ಯಕ್ರಮಗಳು ಯುವಜನರಿಗೆ ಸ್ವಂತ ಉದ್ಯೋಗ ಆರಂಭಿಸಲು ನೆರವಾಗುತ್ತವೆ. ಇದರಿಂದ ಅವರು ಹಳ್ಳಿಗಳಲ್ಲೇ ನೆಲೆಸಿ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಶಿಬಿರದಲ್ಲಿ ತರಬೇತಿ ಪಡೆದ ಮಹಿಳೆಯರು ಮುಂದಿನ ದಿನಗಳಲ್ಲಿ ಸ್ವಂತ ಉದ್ಯೋಗ ಆರಂಭಿಸಲಿ ಎಂದರು.
ಹಸ್ರಗೋಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರದೀಪ ಹೆಗಡೆ ಕರ್ಜಗಿ ಮಾತನಾಡಿ, ಮಹಿಳೆಯರ ಸಬಲೀಕರಣ ಮತ್ತು ಸಮಾಜದ ಉನ್ನತಿಗೆ ಅನಂತಮೂರ್ತಿ ಹೆಗಡೆ ಅವರ ಕೊಡುಗೆ ಮಹತ್ವದ್ದಾಗಿದೆ. ಉಚಿತ ಹೊಲಿಗೆ ತರಬೇತಿ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ನೆರವಾಗಿದ್ದಾರೆ ಎಂದರು.
ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಕುಚಗುಂಡಿ ಗ್ರಾಮಸ್ಥರ ಸಹಕಾರದಿಂದ ಈ ಹಿಂದೆ ವನಮಹೋತ್ಸವ ನಡೆಸಲಾಗಿತ್ತು. ಇದೀಗ ಮಹಿಳೆಯರಿಗಾಗಿ ಉಚಿತ ಹೊಲಿಗೆ ತರಬೇತಿ ಶಿಬಿರ ಆಯೋಜಿಸಲಾಗಿದೆ. ಅಡುಗೆ ಮತ್ತು ಹೊಲಿಗೆ ಕಲಿಕೆ ಸ್ವಾವಲಂಬಿ ಬದುಕಿಗೆ ನೆರವಾಗುತ್ತವೆ. ತರಬೇತಿ ಪಡೆದವರು ಹೊಲಿಗೆ ವೃತ್ತಿಯನ್ನು ಮುಂದುವರಿಸಲು ಟ್ರಸ್ಟ್ ಸಹಕಾರ ನೀಡಲಿದೆ ಎಂದರು.
ಸಮಾರಂಭದ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು. ತರಬೇತಿ ಪೂರ್ಣಗೊಳಿಸಿದ ಶಿಬಿರಾರ್ಥಿಗಳಿಗೆ ಸ್ವಾಮೀಜಿಯವರ ಸಮ್ಮುಖದಲ್ಲಿ ಸೀರೆ, ಬಾಗಿನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ 300ಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಮುಖ ಅಣ್ಣಪ್ಪ ಗೌಡ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆರಿಯಾ ಗೌಡ, ದೇವಸ್ಥಾನದ ಅಧ್ಯಕ್ಷ ಸುಬ್ರಾಯ ಹೆಗಡೆ, ನಾರಾಯಣ ಹೆಗಡೆ ಚಾರೇಕೊಣೆ, ಹೊಲಿಗೆ ಶಿಕ್ಷಕಿ ಆಶಾ ಶಿರಸಿ ಸೇರಿದಂತೆ ಯಲುಗಾರ, ದಂಟಕಲ್ ಹಾಗೂ ಕುಚಗುಂಡಿ ಗ್ರಾಮದ ಹಲವರು ಉಪಸ್ಥಿತರಿದ್ದರು.
ನೇತ್ರಾವತಿ ಹೆಗಡೆ ಸ್ವಾಗತಿಸಿದರು. ಗುರುನಾಥ ಹುಕ್ಲಕೈ ನಿರೂಪಿಸಿದರು. ವಿನಯ ದಂಟಕಲ್ ವಂದಿಸಿದರು.


