ಧಾರವಾಡ: ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಚಾಲನೆ ನೀಡುವ ಸಿದ್ಧತೆ ಆರಂಭವಾಗಿದೆ.
ಮಂಗಳವಾರ ಬೆಳಿಗ್ಗೆ ಚುನಾವಣಾ ವೀಕ್ಷಕ ಮನೋಜ್ ಜೈನ್, ಚುನಾವಣಾಧಿಕಾರಿ ಕೆ.ಎಂ. ಜಾನಕಿ, ಅಭ್ಯರ್ಥಿಗಳು ಹಾಗೂ ಅವರ ಚುನಾವಣಾ ಏಜೆಂಟರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಗಿದ್ದು, ಮತಪೆಟ್ಟಿಗೆಗಳನ್ನು ತೆರೆದು ಮತಪತ್ರಗಳನ್ನು ಬಂಡಲ್ ಮಾಡುವ ಕಾರ್ಯ ಆರಂಭವಾಗಿದೆ.
ಕ್ಷೇತ್ರದ 14 ಮತಪೆಟ್ಟಿಗೆಗಳನ್ನು ಸಂಪೂರ್ಣವಾಗಿ ತೆರೆದು ಮತಪತ್ರಗಳನ್ನು ಬಂಡಲ್ ಮಾಡಿದ ಬಳಿಕ, ಬ್ಯಾಲೆಟ್‌ಗಳನ್ನು ರ‌್ಯಾಂಡಮೈಜೇಷನ್ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ನಂತರ ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆ ಆರಂಭವಾಗಲಿದೆ ಎಂದು ಚುನಾವಣಾಧಿಕಾರಿಗಳ ಮಾಹಿತಿ ತಿಳಿಸಿದೆ.
ಅ. 23ರಂದು ನಡೆದಿದ್ದ ಚುನಾವಣೆಯಲ್ಲಿ ಕ್ಷೇತ್ರದ ಒಟ್ಟು 97,400 ಮತದಾರರ ಪೈಕಿ 73,692 ಮಂದಿ ಮತ ಚಲಾಯಿಸಿದ್ದಾರೆ. ಇವರಲ್ಲಿ 45,161 ಪುರುಷರು ಹಾಗೂ 28,531 ಮಹಿಳೆಯರು ಸೇರಿದ್ದಾರೆ. ಒಟ್ಟಾರೆ ಶೇ. 75.66ರಷ್ಟು ಮತದಾನ ದಾಖಲಾಗಿದೆ.
ಮತ ಎಣಿಕೆಗಾಗಿ 14 ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‌ಗೆ ಒಬ್ಬ ಮತ ಎಣಿಕೆ ಮೇಲ್ವಿಚಾರಕರು ಹಾಗೂ ಇಬ್ಬರು ಮತ ಎಣಿಕೆ ಸಹಾಯಕರನ್ನು ನೇಮಿಸಲಾಗಿದ್ದು, ಸಹಾಯಕ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಎಣಿಕೆ ಪ್ರಕ್ರಿಯೆ ನಡೆಯಲಿದೆ.


