Friday, July 24, 2026
Join WhatsApp Group
HomeNationalಏರ್ ಆಂಬ್ಯುಲೆನ್ಸ್ ದುರಂತ: ಮಸುಕಾಯ್ತು ಕುಟುಂಬದ ಕನಸು

ಏರ್ ಆಂಬ್ಯುಲೆನ್ಸ್ ದುರಂತ: ಮಸುಕಾಯ್ತು ಕುಟುಂಬದ ಕನಸು

ನವದೆಹಲಿ: ಜಾರ್ಖಂಡ್‌ನ ಚಾತ್ರಾ ಜಿಲ್ಲೆಯಲ್ಲಿ ಸಂಭವಿಸಿದ ಏರ್ ಆಂಬ್ಯುಲೆನ್ಸ್ ದುರಂತವು ಒಂದು ಕುಟುಂಬದ ಕನಸುಗಳನ್ನು ಕ್ಷಣಾರ್ಧದಲ್ಲಿ ನುಂಗಿದ ಹೃದಯವಿದ್ರಾವಕ ಘಟನೆಯಾಗಿ ಪರಿಣಮಿಸಿದೆ.

ಲತೇಹರ್ ಜಿಲ್ಲೆಯ ಚಂದ್ವಾ ಪಟ್ಟಣದ ಹೋಟೆಲ್ ಮಾಲೀಕರಾದ 41 ವರ್ಷದ ಸಂಜಯ್ ಕುಮಾರ್, ತಮ್ಮ ಹೋಟೆಲ್‌ನಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅವರಿಗೆ ಶರೀರದ ಸುಮಾರು ಶೇ. 65 ಭಾಗದಲ್ಲಿ ಸುಟ್ಟ ಗಾಯಗಳಾಗಿದ್ದು, ರಾಂಚಿಯ ದೇವ್‌ಕಮಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ವೈದ್ಯರು ಅವರ ಸ್ಥಿತಿ ಗಂಭೀರವಾಗಿರುವುದರಿಂದ ಉತ್ತಮ ಚಿಕಿತ್ಸೆಗಾಗಿ ದೆಹಲಿಗೆ ಸ್ಥಳಾಂತರಿಸುವಂತೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಕುಟುಂಬವು ಆರ್ಥಿಕ ಸಂಕಷ್ಟದಲ್ಲಿದ್ದರೂ ಸಹ ಸಂಬಂಧಿಕರಿಂದ ಸುಮಾರು 8 ಲಕ್ಷ ರೂ. ಸಾಲ ಪಡೆದು ಏರ್ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿತ್ತು. ಸಂಜಯ್ ಅವರನ್ನು ದೆಹಲಿಯ ಸರ್‌ ಗಂಗಾರಾಮ್‌ ಆಸ್ಪತ್ರೆಗೆ ಕರೆದೊಯ್ಯಲು ವಿಮಾನವನ್ನು ಬಾಡಿಗೆಗೆ ಪಡೆದಿತ್ತು.

ಸಂಜಯ್ ಅವರ ಪತ್ನಿ ಅರ್ಚನಾ ಹಾಗೂ ಸಂಬಂಧಿ ಧ್ರುವ್ ಕೂಡ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಇಬ್ಬರು ಸಿಬ್ಬಂದಿ ಮತ್ತು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಸೇರಿ ಒಟ್ಟು ಏಳು ಮಂದಿ ಪ್ರಯಾಣಿಸುತ್ತಿದ್ದರು. ದುರದೃಷ್ಟವಶಾತ್, ಎಲ್ಲರೂ ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮಾಹಿತಿಯ ಪ್ರಕಾರ, Redbird Airways Pvt Ltd ಸಂಸ್ಥೆ ನಡೆಸುತ್ತಿದ್ದ Beechcraft C90 ವಿಮಾನವು ಸೋಮವಾರ ಸಂಜೆ 7:11ಕ್ಕೆ ರಾಂಚಿಯಿಂದ ಹೊರಟಿತ್ತು. ಹವಾಮಾನ ವ್ಯತ್ಯಾಸದ ಹಿನ್ನೆಲೆಯಲ್ಲಿ ಮಾರ್ಗ ಬದಲಾವಣೆ ಕೇಳಿದ ನಂತರ, ವಾರಣಾಸಿಯಿಂದ ದಕ್ಷಿಣ-ಪೂರ್ವ ದಿಕ್ಕಿನಲ್ಲಿ ಸುಮಾರು 100 ನಾಟಿಕಲ್ ಮೈಲು ದೂರದಲ್ಲಿ 7:34ಕ್ಕೆ ವಿಮಾನದೊಂದಿಗೆ ಸಂಪರ್ಕ ಕಳೆದುಕೊಂಡಿದೆ ಎಂದು ತಿಳಿಸಲಾಗಿದೆ.

ಒಂದು ಬಡ ಕುಟುಂಬವು ಒಂದು ಜೀವ ಉಳಿಸಲು ದೊಡ್ಡ ಮೊತ್ತದ ಸಾಲ ಮಾಡಿ ಕೈಗೊಂಡ ಪ್ರಯತ್ನವು ಕೊನೆಗೆ ಭೀಕರ ದುರಂತವಾಗಿ ಅಂತ್ಯಗೊಂಡಿದೆ. ಈ ಘಟನೆ ರಾಜ್ಯವನ್ನಷ್ಟೇ ಅಲ್ಲ, ದೇಶವನ್ನೇ ಬೆಚ್ಚಿಬೀಳಿಸಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share