ಅಲಿ ಖಮೇನಿ ಹತ್ಯೆಯ ಹಿನ್ನೆಲೆಯಲ್ಲಿ ಗೌರಿಬಿದನೂರಿನ ಅಲೀಪುರದಲ್ಲಿ ಅಘೋಷಿತ ಬಂದ್
ಚಿಕ್ಕಬಳ್ಳಾಪುರ: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕಾ ದಾಳಿ ನಡೆಸಿ, ಇರಾನ್ ಸರ್ವೋಚ್ಚ ನಾಯಕ ಅಲಿ ಖಮೇನಿ ಹತ್ಯೆಯಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದ ಹಿನ್ನೆಲೆಯಲ್ಲಿ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲೀಪುರದಲ್ಲಿ ಭಾರೀ ಭಾವನಾತ್ಮಕ ವಾತಾವರಣ ನಿರ್ಮಾಣವಾಗಿದೆ.
ಖಮೇನಿ ಅವರ ಸಾವಿನ ಸುದ್ದಿಯು ಹರಡುತ್ತಿದ್ದಂತೆಯೇ ಅಲೀಪುರ ಗ್ರಾಮ ಸ್ತಬ್ಧಗೊಂಡಿದ್ದು, ಸ್ಥಳೀಯ ಶಿಯಾ ಮುಸ್ಲಿಮರು ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಅಘೋಷಿತ ಬಂದ್ ಆಚರಿಸಿದ್ದಾರೆ. ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದ್ದು, ಹಲವರು ಕಣ್ಣೀರಿಟ್ಟು ತಮ್ಮ ಧಾರ್ಮಿಕ ನಾಯಕರಿಗೆ ಸಂತಾಪ ಸೂಚಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲೀಪುರವು ಈ ಹಿಂದೆ ‘ಬೆಳ್ಳಿಕುಂಟೆ’ ಎಂದು ಕರೆಯಲ್ಪಡುತ್ತಿತ್ತು. ಬಿಜಾಪುರದ ಆದಿಲ್‌ಶಾಹಿಗಳ ಕಾಲದಲ್ಲಿ ವಲಸೆ ಬಂದವರಿಂದ ಈ ಗ್ರಾಮಕ್ಕೆ ‘ಅಲೀಪುರ’ ಎಂಬ ಹೆಸರು ಬಂದಿತು ಎನ್ನಲಾಗುತ್ತದೆ. ಸುಮಾರು 20 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಶಿಯಾ ಮುಸ್ಲಿಮರೇ ಬಹುಸಂಖ್ಯಾತರಾಗಿದ್ದಾರೆ.
ಅಲೀಪುರದ ಜನರಿಗೆ ಇರಾನ್ ದೇಶದೊಂದಿಗೆ ವ್ಯಾಪಾರ, ವೈದ್ಯಕೀಯ ಶಿಕ್ಷಣ, ಧಾರ್ಮಿಕ ಶಿಕ್ಷಣ ಹಾಗೂ ಧಾರ್ಮಿಕ ಪ್ರವಾಸದ ಮೂಲಕ ದೀರ್ಘಕಾಲದ ಸಂಬಂಧವಿದೆ. “ಇರಾನ್ ನಮ್ಮ ಧಾರ್ಮಿಕ ಭೂಮಿ” ಎಂಬ ಭಾವನೆ ಇಲ್ಲಿನ ಶಿಯಾ ಸಮುದಾಯದಲ್ಲಿ ಗಾಢವಾಗಿದೆ.
1986ರಲ್ಲಿ ಅಲಿ ಖಮೇನಿ ಅಲೀಪುರಕ್ಕೆ ಭೇಟಿ ನೀಡಿದ್ದರೆಂದು ಸ್ಥಳೀಯರು ಹೇಳಿಕೊಳ್ಳುತ್ತಾರೆ. ಆ ಭೇಟಿ ಅಲೀಪುರ ಮತ್ತು ಇರಾನ್ ನಡುವಿನ ಧಾರ್ಮಿಕ ಬಾಂಧವ್ಯವನ್ನು ಇನ್ನಷ್ಟು ಗಾಢಗೊಳಿಸಿತು ಎನ್ನಲಾಗುತ್ತದೆ.
ಅಲೀಪುರದ ಶಿಯಾ ಮುಸ್ಲಿಮರಲ್ಲಿ ಖಮೇನಿ ಅವರ ತತ್ವ, ಧಾರ್ಮಿಕ ಆದೇಶಗಳು ಮತ್ತು ಮಾರ್ಗದರ್ಶನವನ್ನು ಅನುಸರಿಸುವ ದೊಡ್ಡ ಬಳಗವಿದೆ. ಖಮೇನಿ ಅವರಿಗೆ ಧರ್ಮಗುರುವಿನ ಸ್ಥಾನಮಾನ ನೀಡಿ ಗೌರವಿಸುತ್ತಿದ್ದರು. ಅವರ ನಿಧನದ ಸುದ್ದಿ ಇಲ್ಲಿನ ಜನರಲ್ಲಿ ಆಘಾತ ಮೂಡಿಸಿದ್ದು, ಗ್ರಾಮದಲ್ಲಿ ದುಃಖದ ವಾತಾವರಣ ಮುಂದುವರಿದಿದೆ.
ಸ್ಥಳೀಯರ ಪ್ರಕಾರ, “ಇದು ಕೇವಲ ರಾಜಕೀಯ ನಾಯಕನ ಮರಣವಲ್ಲ, ನಮ್ಮ ಧಾರ್ಮಿಕ ಗುರುವನ್ನೇ ಕಳೆದುಕೊಂಡಿದ್ದೇವೆ” ಎಂಬ ಭಾವನೆ ಗ್ರಾಮಸ್ಥರಲ್ಲಿ ಆವರಿಸಿದೆ.