Friday, March 13, 2026
HomeStateಮತ್ತೆ ಘರ್ಜಿಸಲಿದೆ ಹಿಂದೂ ಹುಲಿ!

ಮತ್ತೆ ಘರ್ಜಿಸಲಿದೆ ಹಿಂದೂ ಹುಲಿ!

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ವಲಯದಲ್ಲಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿರುವ ಹೆಸರು ಅನಂತಕುಮಾರ ಹೆಗಡೆ. ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಈ ಮಾಜಿ ಸಂಸದರು ಹಾಗೂ ಕೇಂದ್ರ ಸಚಿವರಾಗಿದ್ದ ಅನಂತಕುಮಾರ ಹೆಗಡೆ ಇತ್ತೀಚಿನ ವರ್ಷಗಳಲ್ಲಿ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದರು. ಇದೀಗ ಮತ್ತೆ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿರುವುದು ರಾಜಕೀಯವಾಗಿ ಗಮನ ಸೆಳೆಯುತ್ತಿದೆ.

2024ರ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಪಕ್ಷದ ಆಂತರಿಕ ಬೆಳವಣಿಗೆಗಳ ಹಿನ್ನೆಲೆ ಅವರಿಗೆ ಟಿಕೆಟ್ ನೀಡಲಾಗಿರಲಿಲ್ಲ. ಚುನಾವಣಾ ಪ್ರಚಾರ ಅವಧಿಯಲ್ಲಿಯೂ ಅವರು ಸಕ್ರಿಯವಾಗಿ ಕಾಣಿಸಿಕೊಳ್ಳದಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ನಂತರವೂ ಪಕ್ಷ ಸಂಘಟನಾ ಚಟುವಟಿಕೆಗಳಿಂದ ದೂರವಿದ್ದು, ತಮ್ಮ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಕ್ಷದ ಗುರುತುಗಳನ್ನು ಬಳಸದೆ ಮಿತವಾದ ಹಾಜರಾತಿ ನೀಡುತ್ತಿದ್ದರು.

ಇದೀಗ ಮಾರ್ಚ್ 8ರಂದು ಭಟ್ಕಳದಲ್ಲಿ ನಡೆಯಲಿರುವ ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಲು ಅವರು ಒಪ್ಪಿಕೊಂಡಿರುವುದು ಮಹತ್ವ ಪಡೆದುಕೊಂಡಿದೆ. ಪ್ರಖರ ವಾಗ್ಮಿತ್ವಕ್ಕೆ ಹೆಸರಾದ ಹೆಗಡೆ ಅವರು ಸೂಕ್ಷ್ಮ ರಾಜಕೀಯ ಹಿನ್ನೆಲೆಯ ಭಟ್ಕಳದಲ್ಲಿ ದಿಕ್ಸೂಚಿ ಭಾಷಣ ಮಾಡಲಿರುವುದು ಬೆಂಬಲಿಗರಲ್ಲಿ ಕುತೂಹಲ ಹುಟ್ಟಿಸಿದೆ. ಸಂಘಟಕರು ಕಾರ್ಯಕ್ರಮದ ಅಂಗವಾಗಿ ಬೈಕ್ ಜಾಥಾ ಹಾಗೂ ಮೆರವಣಿಗೆಗಳ ಸಿದ್ಧತೆ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ.

ಲೋಕಸಭಾ ಚುನಾವಣೆ ನಂತರ ಅವರು ಸಾಮಾಜಿಕ ಜಾಲತಾಣಗಳಲ್ಲಿ ಕೆಲಕಾಲ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರೂ, ನಂತರ ನ್ಯಾನೋ ತಂತ್ರಜ್ಞಾನ ಆಧಾರಿತ ಔಷಧೀಯ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದಾಗಿ ತಿಳಿದುಬಂದಿತ್ತು. ಕೆಲವು ಮಾಧ್ಯಮಗಳಲ್ಲಿ ತಮ್ಮ ಸಂಶೋಧನಾ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡಿದ್ದರೂ, ಸಂಘಟನಾ ರಾಜಕಾರಣದಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ.

ಇತ್ತೀಚಿನ ಮಾಹಿತಿಗಳ ಪ್ರಕಾರ, ಸಂಘಟನಾ ವಲಯದ ಹಿರಿಯರೊಂದಿಗಿನ ಮಾತುಕತೆಗಳ ಬಳಿಕವೇ ಅವರು ಈ ವೇದಿಕೆಗೆ ಬರಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಧಿಕೃತ ರಾಜಕೀಯ ಘೋಷಣೆ ಇನ್ನೂ ಹೊರಬಂದಿಲ್ಲದಿದ್ದರೂ, ಭಟ್ಕಳದ ವೇದಿಕೆ ಮತ್ತೊಮ್ಮೆ ಅನಂತಕುಮಾರ ಹೆಗಡೆ ಅವರನ್ನು ಸಾರ್ವಜನಿಕ ಚರ್ಚೆಯ ಕೇಂದ್ರಬಿಂದುವಿಗೆ ತರುವ ಸಾಧ್ಯತೆ ಹೆಚ್ಚಾಗಿದೆ.

ಈ ಕಾರ್ಯಕ್ರಮವು ಅವರ ರಾಜಕೀಯ ಭವಿಷ್ಯಕ್ಕೆ ಹೊಸ ದಿಕ್ಕು ನೀಡುತ್ತದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share