ಅಂಕೋಲಾ: ಮನೆಯ ಹಿಂಬದಿಯಲ್ಲಿದ್ದ ಗೋಡೌನ್‌ನ ಬಾಗಿಲಿನ ಚಿಲಕ ಬಗ್ಗಿಸಿ ಒಳನುಗ್ಗಿದ ಕಳ್ಳರು 90 ಸಾವಿರ ರೂ ಮೌಲ್ಯದ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಅಂಕೋಲಾ ತಾಲೂಕಿನ ಹಳವಳ್ಳಿಯಲ್ಲಿ ನಡೆದಿದೆ.
ಪುನರ್ವಸತಿ ಕೇಂದ್ರ ಹಳವಳ್ಳಿ, ಡೋಂಗ್ರಿ ಪಂಚಾಯಿತಿ ವ್ಯಾಪ್ತಿಯ ನಿವಾಸಿ ಹಾಗೂ ಕೃಷಿಕ ರಾಮಕೃಷ್ಣ ನರಸಿಂಹ ಹರಿಮನೆ ಅವರು ಈ ಕುರಿತು ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ದೂರಿನ ಪ್ರಕಾರ, ಸೆಪ್ಟೆಂಬರ್ 14ರಂದು ಬೆಳಗ್ಗೆ 10 ಗಂಟೆಯಿಂದ ಸೆಪ್ಟೆಂಬರ್ 18ರಂದು ಬೆಳಗ್ಗೆ 10.30ರ ನಡುವಿನ ಅವಧಿಯಲ್ಲಿ ಕಳ್ಳತನ ನಡೆದಿದೆ.
ರಾಮಕೃಷ್ಣ ಅವರ ಮನೆಯ ಹಿಂಭಾಗದಲ್ಲಿರುವ ಗೋಡೌನ್‌ನ ಬಾಗಿಲಿನ ಚಿಲಕವನ್ನು ಬಗ್ಗಿಸಿ ಯಾರೋ ಒಳನುಗ್ಗಿದ್ದಾರೆ. ಬಳಿಕ ಕೋಣೆಯಲ್ಲಿ ಇಡಲಾಗಿದ್ದ ಸುಮಾರು 71 ಕೆ.ಜಿ. ತೂಕದ ಮೂರು ಚೀಲ ಅಡಿಕೆಯನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಕಳವಾದ ಅಡಿಕೆಯ ಅಂದಾಜು ಮೌಲ್ಯ 90 ಸಾವಿರ ರೂಪಾಯಿ ಎಂದು ದೂರಿನಲ್ಲಿ ತಿಳಿಸಲಾಗಿದೆ.ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳತನ ಮಾಡಿದ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


