ಅಂಕೋಲಾ: ಮದ್ಯದ ಅಮಲಿನಲ್ಲಿ ಮನೆಗೆ ಬಂದ ತಂದೆ, ತಾಯಿಯ ಮೇಲೆ ರಾಡ್ನಿಂದ ಹಲ್ಲೆಗೆ ಮುಂದಾದಾಗ ಬಿಡಿಸಲು ಹೋದ ಮಗನಿಗೂ ಹಲ್ಲೆ ಮಾಡಿ ಬೆದರಿಕೆ ಹಾಕಿದ ಆರೋಪ ಅಂಕೋಲಾ ತಾಲೂಕಿನ ಕೊಡ್ಲಗದ್ದೆಯಲ್ಲಿ ಕೇಳಿಬಂದಿದೆ.
ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಡ್ಲಗದ್ದೆಯ ಲಕ್ಷ್ಮಣ ಕಂತ್ರಿ ಅಂಬಿಗ (57) ವಿರುದ್ಧ ಬಿಎನ್ಎಸ್ನ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಕುರಿತು ಪುತ್ರ ಪ್ರದೀಪ ಲಕ್ಷಣ ಅಂಬಿಗ (27) ಅವರು ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಅವರ ತಂದೆ ಲಕ್ಷ್ಮಣ ಅಂಬಿಗ ಅವರು ಪ್ರತಿದಿನ ವಿಪರೀತ ಮದ್ಯಪಾನ ಮಾಡಿಕೊಂಡು ಮನೆಗೆ ಬಂದು ತಾಯಿಗೆ ಚಾಕು ಅಥವಾ ರಾಡ್ನಿಂದ ಹಲ್ಲೆ ಮಾಡಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ.
ಸೆ.14ರಂದು ರಾತ್ರಿ ಸುಮಾರು 9 ಗಂಟೆ ವೇಳೆಯೂ ಇದೇ ರೀತಿ ಮದ್ಯಪಾನ ಮಾಡಿಕೊಂಡು ಮನೆಗೆ ಬಂದಿದ್ದ ತಂದೆ, ಅವಾಚ್ಯವಾಗಿ ಬೈಯುತ್ತಾ ತಾಯಿಗೆ ರಾಡ್ನಿಂದ ಹೊಡೆಯಲು ಮುಂದಾಗಿದ್ದರು. ಇದನ್ನು ಬಿಡಿಸಲು ಹೋದಾಗ ಪ್ರದೀಪ ಅವರಿಗೂ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇಷ್ಟೇ ಅಲ್ಲದೆ, “ನಿನಗೆ ಮತ್ತು ನಿಮ್ಮ ಅಮ್ಮನಿಗೆ ನೋಡಿಕೊಳ್ಳುತ್ತೇನೆ” ಎಂದು ಬೆದರಿಕೆ ಹಾಕಿ ಅಲ್ಲಿಂದ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರದೀಪ ಅವರು ಅಂಕೋಲಾ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.