ಚಿತೆಯ ಬೆಂಕಿಯಲ್ಲಿ ಚಳಿ ಕಾಯಿಸುವವರಿದ್ದಾರೆ ಹುಶಾರು!
ಶಿರಸಿ: ಅಡಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕಿ ರೋಗ ಇತ್ತೀಚಿನದ್ದಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದರ ತೀವ್ರತೆ ಹೆಚ್ಚಾಗಿದೆ. ಮೊದಲು ಒಂದೆರಡು ಗಿಡಗಳಿಗೆ ಸೀಮಿತವಾಗಿದ್ದ ರೋಗ, ಈಗ ಇಡೀ ತೋಟವನ್ನೇ ತಿಂದುಹಾಕುವ ಮಟ್ಟಕ್ಕೆ ಬಂದಿದೆ. ಈ ರೋಗದ ಮೂಲ ಕಾರಣ ಶಿಲೀಂಧ್ರ (fungus).
ವಿಶೇಷವಾಗಿ ಮಳೆ ಅಧಿಕವಾಗುವ ಪ್ರದೇಶಗಳು, ತೇವಾಂಶ ಜಾಸ್ತಿ ಇರುವ ತೋಟಗಳು, ಗಾಳಿ ಸಂಚಾರ ಕಡಿಮೆ ಇರುವ ಸಾಂದ್ರ ನೆಡುವಿಕೆ ಇವೆಲ್ಲ ಎಲೆಚುಕ್ಕಿ ರೋಗಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸುತ್ತವೆ. ಹಳೆಯ ಎಲೆಗಳು, ನೆಲದಲ್ಲಿ ಬಿದ್ದ ಒಣ ಎಲೆಗಳು, ಸರಿಯಾದ ಸ್ವಚ್ಛತೆ ಇಲ್ಲದ ತೋಟಗಳು ಈ ಶಿಲೀಂಧ್ರಕ್ಕೆ ನೆಲೆ ಕೊಡುತ್ತವೆ. ಮಳೆಗಾಲದಲ್ಲಿ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ರೋಗ ವೇಗವಾಗಿ ಹರಡುವುದು ಸಾಮಾನ್ಯ. ಒಂದು ಗಿಡ ಸಾಯುವುದು ಎಂದರೆ 10-15 ವರ್ಷಗಳ ಪರಿಶ್ರಮ ಕಣ್ಣೆದುರೇ ಕರಗುವುದು. ಇದು ಅಡಕೆ ಬೆಳೆಗಾರರಲ್ಲಿ ತೀವ್ರ ಆತಂಕ ಮೂಡಿಸಿರುವುದಂತೂ ಸತ್ಯ.
ಇಲ್ಲಿ ದೊಡ್ಡ ಸಮಸ್ಯೆಯೆಂದರೆ, ಎಲೆಚುಕ್ಕಿ ರೋಗಕ್ಕೆ ಇದುವರೆಗೂ ಒಂದು ಶಾಶ್ವತ, ಖಚಿತ ಪರಿಹಾರ ಇಲ್ಲ. ಕೃಷಿ ವಿಜ್ಞಾನಿಗಳು ಮುನ್ನೆಚ್ಚರಿಕೆ ಕ್ರಮಗಳನ್ನೇ ಹೆಚ್ಚು ಒತ್ತಿ ಹೇಳುತ್ತಾರೆ. ತೋಟದ ಸ್ವಚ್ಛತೆ, ಗಿಡಗಳ ನಡುವೆ ಸೂಕ್ತ ಅಂತರ, ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸೋಂಕಿತ ಎಲೆಗಳನ್ನು ತೆಗೆದುಹಾಕುವುದು ಇವೆಲ್ಲ ಮುಖ್ಯ. ಆದರೆ ಈ ಕ್ರಮಗಳು ರೋಗ ಬಾರದಂತೆ ತಡೆಯಲು ಸಹಾಯ ಮಾಡುತ್ತವೆಯೇ ಹೊರತು ಬಂದ ನಂತರ ಸಂಪೂರ್ಣವಾಗಿ ಗುಣಪಡಿಸುವುದಿಲ್ಲ. ರೋಗ ತೀವ್ರವಾದಾಗ ಔಷಧಿ ಸಿಂಪಡಣೆ ಅನಿವಾರ್ಯವಾಗುತ್ತದೆ.
ಇಲ್ಲಿಯೇ ಮತ್ತೊಂದು ಗಂಭೀರ ವಿಚಾರ ಶುರುವಾಗುತ್ತದೆ. ಎಲೆಚುಕ್ಕಿ ರೋಗದ ಹೆಸರಿನಲ್ಲಿ ಮಾರುಕಟ್ಟೆಗೆ ಅಸಂಖ್ಯಾತ ಔಷಧಿಗಳು ಬರುತ್ತಿವೆ. ಪ್ರತಿಯೊಂದು ಕಂಪನಿಯೂ ತನ್ನ ಔಷಧಿಯೇ ಅತ್ಯುತ್ತಮ, ಶೇ.100 ಪರಿಣಾಮಕಾರಿ ಎಂದು ಹೇಳುತ್ತದೆ. ಬೆಳೆಗಾರ ಆತಂಕದಲ್ಲಿರುತ್ತಾನೆ, ತೋಟ ಉಳಿಸಿಕೊಳ್ಳಬೇಕೆಂಬ ತವಕದಲ್ಲಿರುತ್ತಾನೆ.
ಈ ಮನಸ್ಥಿತಿಯನ್ನೇ ಕೆಲವು ಔಷಧಿ ಕಂಪನಿಗಳು ಮತ್ತು ಮಧ್ಯವರ್ತಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ. ದುಬಾರಿ ಔಷಧಿಗಳು, ಮರುಮರು ಸಿಂಪಡಣೆ ಸಲಹೆಗಳು, “ಇದನ್ನೂ ಹಾಕಿ, ಅದನ್ನೂ ಹಾಕಿ” ಎಂಬ ಒತ್ತಡ ಇವೆಲ್ಲ ಬೆಳೆಗಾರನ ಖರ್ಚು ಹೆಚ್ಚಿಸುತ್ತವೆ. ಆದರೆ ಫಲಿತಾಂಶ ಮಾತ್ರ ನಿರೀಕ್ಷೆಗೆ ತಕ್ಕಷ್ಟು ಸಿಗುವುದಿಲ್ಲ.
ಇನ್ನೊಂದು ಸಮಸ್ಯೆ ಎಂದರೆ, ಅತಿಯಾಗಿ ಮತ್ತು ಅವಶ್ಯಕತೆ ಇಲ್ಲದೇ ಔಷಧಿ ಬಳಸುವುದು. ಇದರಿಂದ ಶಿಲೀಂಧ್ರಗಳು ಔಷಧಿಗೆ ಹೊಂದಿಕೊಳ್ಳುತ್ತವೆ (resistance). ಆಗ ಮೊದಲಿಗೆ ಕೆಲಸ ಮಾಡಿದ ಔಷಧಿ ಮುಂದಿನ ವರ್ಷ ಪರಿಣಾಮಕಾರಿಯಾಗುವುದಿಲ್ಲ. ಹೀಗಾಗಿ ಬೆಳೆಗಾರ ಇನ್ನೂ ದುಬಾರಿ ಔಷಧಿಯ ಹಿಂದೆ ಓಡಬೇಕಾಗುತ್ತದೆ. ಇದು ಒಂದು ಕೆಟ್ಟ ಚಕ್ರ. ತೋಟ ಉಳಿಯುವುದಕ್ಕಿಂತಲೂ ಕಂಪನಿಗಳ ಮಾರಾಟ ಮಾತ್ರ ಹೆಚ್ಚಾಗುತ್ತದೆ ಎಂಬುದು ರೈತರ ಗಮನದಲ್ಲಿರಬೇಕಷ್ಟೇ.
ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರಗಳು ಸೂಚಿಸುವ ಔಷಧಿ ಮತ್ತು ಪ್ರಮಾಣವನ್ನು ಪಾಲಿಸುವುದು ಮುಖ್ಯ. ಒಂದೇ ಔಷಧಿಯನ್ನು ಮತ್ತೆ ಮತ್ತೆ ಬಳಸದೇ, ಬದಲಾವಣೆ ಮಾಡುವುದು ಅಗತ್ಯವಿದೆ. ಜೊತೆಗೆ, ಕೇವಲ ಔಷಧಿಯ ಮೇಲೆ ಅವಲಂಬಿಸದೇ ತೋಟ ನಿರ್ವಹಣೆಗೆ ಹೆಚ್ಚು ಒತ್ತು ಕೊಡಬೇಕು. ಗಾಳಿ ಬೆಳಕು ಸರಿಯಾಗಿ ಸಿಗುವಂತೆ ಮಾಡುವುದು, ಹಳೆಯ ಎಲೆಗಳನ್ನು ತೆಗೆದುಹಾಕುವುದು, ನೀರು ನಿಲ್ಲದಂತೆ ನೋಡಿಕೊಳ್ಳುವುದು ಇವು ಔಷಧಿಗಿಂತಲೂ ಹೆಚ್ಚು ಪರಿಣಾಮಕಾರಿ ಕ್ರಮಗಳು.
ಹೀಗಾಗಿ, ಯಾರೋ ಹೇಳಿದರು, ಇನ್ಯಾರೋ ಒತ್ತಾಯಿಸಿದರು, ನಂಬಿಸಿದರು ಎಂದು ನೀವೂ ಮೋಸ ಹೋಗಬೇಡಿ. ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು, ವಿವೇಚನೆಯಿಂದ ಹೆಜ್ಜೆಯಿಡಿ.
ಇನ್ನೂ ಕೆಲ ಔಷಧಿ ಕಂಪನಿಗಳ ಲೆಕ್ಕಾಚಾರ ನೋಡಿದರೆ ಚಿತೆಯ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವಂತಿದೆ. ಉತ್ತರಕನ್ನಡ ಜಿಲ್ಲೆಯ ಕೆಲ ಪ್ರದೇಶಗಳ ಬಡ, ಚಿಕ್ಕ ಹಿಡುವಳಿದಾರರನ್ನೇ ಇವರು ಗುರಿಯಾಗಿಸುತ್ತಿದ್ದಾರೆ. ಅವರಿಂದ ಅಷ್ಟಿಷ್ಟು ಹಣ ಪಡೆದು, ಸಂಪೂರ್ಣ ಪರಿಹಾರದ ಭರವಸೆ ಮೂಡಿಸುವ ಅಭಿಪ್ರಾಯಗಳನ್ನು ಹೇಳಿಸಿ, ದೊಡ್ಡ ಹಿಡುವಳಿದಾರರನ್ನೂ ಸೆಳೆಯುತ್ತಿದ್ದಾರೆಂಬ ಅಂಶ ಬಯಲಾಗುತ್ತಿದೆ. ಇದನ್ನೇ ವಿವಿಧ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚಾರ ಮಾಡಿ ʻಎಲೆಚುಕ್ಕಿಗೆ ಪರಿಹಾರ ಸಿಕ್ಕೇಬಿಡ್ತುʼ ಎಂಬಂತೆ ಬಿಂಬಿಸಿ ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಇನ್ನೂ ಕೆಲ ಕಂಪನಿಗಳು ʻಪರಿಣಾಮ ಕಾಣದಿದ್ದರೆ ನಿಮ್ಮ ಹಣ ವಾಪಸ್ʼ ಎಂಬರ್ಥದ ಪ್ರಚಾರ ಮಾಡುತ್ತಿದ್ದು, ಪರಿಣಾಮ ದೊರೆತ ಮೇಲೆಯೇ ಹಣ ಕೊಡಿ ಎನ್ನುವುದಿಲ್ಲವೇಕೆ ಎಂಬ ಅಭಿಪ್ರಾಯ ರೈತಾಪಿ ವಲಯದಲ್ಲಿ ಕೇಳಿಬರುತ್ತಿದೆ!