16 ಲಕ್ಷ ರೂ ಮೌಲ್ಯದ ಸೊತ್ತು ವಶಕ್ಕೆ
ಬೆಟ್ಟದಪುರ: ಗೋಡೌನ್ನಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆಯನ್ನು ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಬೆಟ್ಟದಪುರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಸುಮಾರು 16 ಲಕ್ಷ ರೂ ಮೌಲ್ಯದ ಅಡಿಕೆ, ನಗದು ಹಾಗೂ ವಾಹನ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಟ್ಟದಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬೆಟ್ಟದತುಂಗ ಗ್ರಾಮದ ನಿವಾಸಿ ಟಿ.ಆರ್. ಶ್ರೀನಾಥ್ ರಾಜೇಅರಸ್ ಅವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಅಡಿಕೆಯನ್ನು ಗ್ರಾಮದ ಗೋಡೌನ್ನಲ್ಲಿ ಸಂಗ್ರಹಿಸಿಟ್ಟಿದ್ದರು. ದಿನಾಂಕ 02.03.2026ರಂದು ಗೋಡೌನ್ನಲ್ಲಿ ಇಟ್ಟಿದ್ದ ಸುಮಾರು 15 ಕ್ವಿಂಟಾಲ್ ಅಡಿಕೆಯನ್ನು ಯಾರೋ ಕಳ್ಳರು ಕಳ್ಳತನ ಮಾಡಿರುವುದಾಗಿ ಅವರು ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಅವರ ಮಾರ್ಗದರ್ಶನದಲ್ಲಿ, ಅಪರ ಪೊಲೀಸ್ ಅಧೀಕ್ಷಕರಾದ ಸಿ. ಮಲ್ಲಿಕ್ ಹಾಗೂ ನಾಗೇಶ್ ಎಲ್. ಮತ್ತು ಹುಣಸೂರು ಉಪವಿಭಾಗದ ಡಿವೈಎಸ್ಪಿ ರವಿ ಅವರ ಮೇಲ್ವಿಚಾರಣೆಯಲ್ಲಿ, ಬೈಲಕುಪ್ಪೆ ವೃತ್ತ ನಿರೀಕ್ಷಕ ದೀಪಕ್ ಎಂ.ಕೆ. ಹಾಗೂ ಬೆಟ್ಟದಪುರ ಪೊಲೀಸ್ ಠಾಣೆಯ ಪಿಎಸ್ಐ ಅಜಯ್ ಕುಮಾರ್ ನೇತೃತ್ವದಲ್ಲಿ ಅಪರಾಧ ಪತ್ತೆ ದಳವನ್ನು ರಚಿಸಲಾಗಿತ್ತು.
ತನಿಖೆಯ ವೇಳೆ ಬಿ.ಕೆ. ವಿವೇಕ್ (ಕೆ. ಬೆಳತ್ತೂರು ಗ್ರಾಮ, ಸರಗೂರು ತಾಲೂಕು), ಪ್ರಸನ್ನ ಎಸ್ @ ರಾಮು (ನಜರ್ಬಾದ್, ಮೈಸೂರು ನಗರ) ಮತ್ತು ರಾಜೇಶ್ (ರಾಘವೇಂದ್ರನಗರ, ಮೈಸೂರು ನಗರ) ಎಂಬ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ವಿಚಾರಣೆಯಲ್ಲಿ ಆರೋಪಿಗಳು ಬೆಟ್ಟದಪುರ ಠಾಣೆಯ ಈ ಪ್ರಕರಣ ಸೇರಿದಂತೆ ಬೈಲಕುಪ್ಪೆ ಠಾಣಾ ವ್ಯಾಪ್ತಿಯ ಒಂದು ಪ್ರಕರಣ, ಸಾಲಿಗ್ರಾಮ ಠಾಣಾ ವ್ಯಾಪ್ತಿಯ ಮೂರು ಪ್ರಕರಣಗಳು ಹಾಗೂ ಮೈಸೂರು ನಗರದ ವಿಜಯನಗರ ಠಾಣಾ ವ್ಯಾಪ್ತಿಯ ಒಂದು ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಬಂಧಿತರಿಂದ 3 ಲಕ್ಷ ರೂ ಮೌಲ್ಯದ KA-04 AA-0900 ನೋಂದಣಿ ಸಂಖ್ಯೆಯ ಟಾಟಾ ಏಸ್ ಸರಕು ಸಾಗಣೆ ವಾಹನ, ಸುಮಾರು 3 ಲಕ್ಷ ರೂ ಮೌಲ್ಯದ ಮೂರು ಚೀಲ ಬಟ್ಟೆಗಳು, 8 ಲಕ್ಷ ರೂ ಮೌಲ್ಯದ ಅಡಿಕೆ ಹಾಗೂ 2 ಲಕ್ಷ ರೂ ನಗದು ಹಣ ಸೇರಿ ಒಟ್ಟು 16 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಪತ್ತೆ ಕಾರ್ಯದಲ್ಲಿ ಬೈಲಕುಪ್ಪೆ ವೃತ್ತದ ವೃತ್ತ ನಿರೀಕ್ಷಕ ದೀಪಕ್ ಎಂ.ಕೆ., ಪಿಎಸ್ಐ ಅಜಯ್ ಕುಮಾರ್, ಎಎಸ್ಐ ಮಂಜುನಾಥ ಹಾಗೂ ಪೊಲೀಸ್ ಸಿಬ್ಬಂದಿ ಶಂಕರ ಎಸ್.ಎಸ್., ಪ್ರಭಾಕರ್, ಅನಂತ ಸಿ.ಆರ್., ಮಲ್ಲೇಶ್, ಸತೀಶ್ ಕುಮಾರ್, ಪ್ರೇಮಕುಮಾರ್ ಎಸ್.ಡಿ., ಬಷೀರ್ ಅಹಮದ್, ಶತ್ರುಜ್ಞ ಎನ್.ಕೆ., ಮಂಜುನಾಥ ಹೆಚ್.ಬಿ., ಹರ್ಷ ಎಸ್.ಎನ್. ಮತ್ತು ಶಿವಪ್ಪ ಅವರುಗಳು ಪಾಲ್ಗೊಂಡಿದ್ದರು.
ವರದಿ: ಪ್ರಸನ್ನ ಕುಮಾರ್ ಬಿ.ಎಸ್.