ಕಾರವಾರ: ಸರ್ಕಾರವು ಭೂದಾಖಲೆಗಳ ಪಾರದರ್ಶಕ, ಪರಿಣಾಮಕಾರಿ ಮತ್ತು ಸಮಯಕ್ಕೆ ಅನುಗುಣವಾಗಿ ನವೀಕರಣವನ್ನು ಖಚಿತಪಡಿಸಿಕೊಳ್ಳಲು ಭೂಮಿ ಮತ್ತು ಕಂದಾಯ ನ್ಯಾಯಾಲಯಗಳ ಪ್ರಕರಣ ನಿರ್ವಹಣಾ ವ್ಯವಸ್ಥೆ (RCCMS) ನಂತಹ ಡಿಜಿಟಲ್ ಆಡಳಿತ ವ್ಯವಸ್ಥೆಗಳನ್ನು ಜಾರಿಗೆ ತಂದಿದೆ.
ಈ ಹಿಂದೆ ಮ್ಯುಟೇಶನಗಳಿಗೆ ಸಂಬಂಧಿಸಿ ಎಲ್ಲಾ 7 ದಿನಗಳ ಹಾಗೂ 15 ದಿನಗಳ ನೋಟೀಸು ಅವಧಿ ಹೊಂದಿರುವ ಮ್ಯುಟೇಶನ್ ಗಳನ್ನು ನೋಟೀಸು ಅವಧಿಯು ಮುಕ್ತಾಯವಾದ ನಂತರ ಸಂಬಂಧಪಟ್ಟ ರಾಜಸ್ವ ನಿರೀಕ್ಷಕರು ಖುದ್ದಾಗಿ ಡಿಜಿಟಲ್ ಸಹಿ ಮೂಲಕ ಅನುಮೋದನೆ ನೀಡುತ್ತಿದ್ದು. ಇದರಿಂದಾಗಿ ಸಾರ್ವಜನಿಕರು ಸಲ್ಲಿಸಿರುವ ಮ್ಯುಟೇಶನ್ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿತ್ತು.
ಈ ಸಮಸ್ಯೆಯನ್ನು ಬಗೆಹರಿಸಲು, ಕಂದಾಯ ಸಚಿವರು ಫೆಬ್ರವರಿ 24ರಂದು ಸ್ವಯಂ ಚಾಲಿತ ಮ್ಯುಟೇಶನ್ ತಂತ್ರಾಂಶಕ್ಕೆ ಚಾಲನೆ ನೀಡಿದ್ದು, 7 ದಿನಗಳ ನೋಂದಾಯಿತ ಮ್ಯುಟೇಶನ್ ಹಾಗೂ 15 ದಿನಗಳ ನೋಂದಾಯಿತವಲ್ಲದ ಪೌತಿ ಮ್ಯುಟೇಶನ್ಗಳ ನೋಟೀಸು ಅವಧಿಯು ಮುಕ್ತಾಯವಾದ ನಂತರ ತಂತ್ರಾಂಶದ ಮೂಲಕ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಸರ್ವರ್ ಸಹಿ ಮೂಲಕ ಸ್ವಯಂಚಾಲಿತವಾಗಿ ಅನುಮೋದನೆಯಾಗುತ್ತದೆ. ಮ್ಯುಟೇಶನ್ ಪೂರ್ಣಗೊಂಡ ನಂತರ ಸಂಬಂಧಪಟ್ಟವರಿಗೆ ಎಸ್.ಎಂ.ಎಸ್ ಮೂಲಕ ಮಾಹಿತಿಯನ್ನು ನೀಡಲಾಗುತ್ತದೆ.
7 ಕೆಲಸದ ದಿನಗಳು ಅಥವಾ 15 ಕೆಲಸದ ದಿನಗಳ ನೋಟಿಸ್ ಅವಧಿಯೊಳಗೆ ಕಂದಾಯ ನಿರೀಕ್ಷಕರು (ಸರ್ಕಾರಿ ಆಕ್ಷೇಪ) ಮತ್ತು ಸಾರ್ವಜನಿಕರಿಗೆ ಲಾಗಿನ್ ನೀಡಲಾಗಿದ್ದು, ಯಾವುದೇ ಸ್ಥಳದಿಂದ ಆಕ್ಷೇಪಣೆ ಸಲ್ಲಿಸಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ಆಕ್ಷೇಪಣೆ ಸಲ್ಲಿಸಿದ್ದಲ್ಲಿ ಸದರಿ ಮುಟೇಶನ್ ಪೂರ್ಣಗೊಳಿಸದೆ, RCCMS ತಂತ್ರಾಂಶದ ತಹಸೀಲ್ದಾರರ ನ್ಯಾಯಾಲಯಕ್ಕೆ ಸದರಿ ಪ್ರಕರಣವನ್ನು ವರ್ಗಾಯಿಸಲಾಗುತ್ತದೆ.
ಸಾರ್ವಜನಿಕರು ತಮ್ಮ ಪಹಣಿಗಳಿಗೆ ಆಧಾರ್ ಜೋಡಣೆ ಮಾಡಿಕೊಂಡಿರುವ ಪ್ರಕರಣಗಳಲ್ಲಿ ಪಹಣಿಯಲ್ಲಿ ಏನಾದರೂ ಬದಲಾವಣೆಯಾದಲ್ಲಿ ಮೊಬೈಲ್ ನಲ್ಲಿ SMS ಬರುವುದರಿಂದ ಅಮಾಯಕರು ಶೋಷಣೆಗೆ ಒಳಗಾಗುವುದು ತಪ್ಪುತ್ತದೆ. ಇದರಿಂದಾಗಿ ಸಾರ್ವಜನಿಕರು ಈವರೆಗೂ ಪಹಣಿಗೆ ಆಧಾರ್ ಜೋಡಣೆ ಮಾಡಿಕೊಳ್ಳದೇ ಇದ್ದಲ್ಲಿ ಕಡ್ಡಾಯವಾಗಿ ಆಧಾರ್ ಜೋಡಣೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.