Thursday, October 22, 2026
HomeCrimeಬನವಾಸಿ | ಸ್ಕೂಟಿಗೆ ಗುದ್ದಿದ ಓಮ್ನಿ; ಹಿಂಬದಿ ಸವಾರನ ಬದುಕು ಅಂತ್ಯ

ಬನವಾಸಿ | ಸ್ಕೂಟಿಗೆ ಗುದ್ದಿದ ಓಮ್ನಿ; ಹಿಂಬದಿ ಸವಾರನ ಬದುಕು ಅಂತ್ಯ

ಬನವಾಸಿ: ಓಮಿನಿ ಮತ್ತು ಸ್ಕೂಟಿ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟಿಯ ಹಿಂಬದಿ ಸವಾರ ಮೃತಪಟ್ಟ ಘಟನೆ ಸೋಮವಾರ ಬನವಾಸಿಯ ಕೆನರಾ ಬ್ಯಾಂಕ್ ಎದುರು ನಡೆದಿದೆ.

ಶಿರಸಿ ತಾಲೂಕಿನ ತಿಗಣಿ ಗ್ರಾಮದ ಶಂಕರ ಮಲ್ಲಪ್ಪ ಗೌಡ (55) ಮೃತಪಟ್ಟವರು. ಇವರು ಕೃಷಿ ಕೆಲಸ ಮಾಡಿಕೊಂಡಿದ್ದರು.

ಅಕ್ಟೋಬರ್ 19ರಂದು ಬೆಳಗ್ಗೆ 10 ಗಂಟೆಗೆ ತಿಗಣಿಯಿಂದ ಬನವಾಸಿಯ ಕೆನರಾ ಬ್ಯಾಂಕ್‌ಗೆ ತೆರಳಲು ಚಂದ್ರಶೇಖರ ವೀರಭದ್ರಪ್ಪ ಗೌಡ (58) ಅವರು ತಮ್ಮ ಡಿಯೋ ಸ್ಕೂಟಿಯಲ್ಲಿ ಶಂಕರ ಅವರನ್ನು ಹಿಂಬದಿ ಸವಾರರಾಗಿ ಕೂರಿಸಿಕೊಂಡು ಹೊರಟಿದ್ದರು.

ಬೆಳಗ್ಗೆ ಸುಮಾರು 11 ಗಂಟೆಗೆ ಬನವಾಸಿ–ಶಿರಸಿ ರಸ್ತೆಯ ಕೆನರಾ ಬ್ಯಾಂಕ್ ಎದುರು ತಲುಪಿದಾಗ, ರಸ್ತೆಯ ಪಕ್ಕದಲ್ಲಿ ಶಿರಸಿ ಕಡೆಗೆ ಮುಖಮಾಡಿ ನಿಂತಿದ್ದ ಓಮಿನಿ ವಾಹನದ ಚಾಲಕ ಏಕಾಏಕಿ ಯಾವುದೇ ಮುನ್ಸೂಚನೆ ನೀಡದೆ ವಾಹನವನ್ನು ಬಲಕ್ಕೆ ತಿರುಗಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಓಮಿನಿ ವಾಹನ ಸ್ಕೂಟಿಗೆ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಸ್ಕೂಟಿಯ ಹಿಂಬದಿ ಸವಾರ ಶಂಕರ ಅವರು ರಸ್ತೆಗೆ ಬಿದ್ದಿದ್ದು, ಅವರ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿ ರಕ್ತಸ್ರಾವವಾಗಿತ್ತು. ಸ್ಕೂಟಿ ಚಾಲಕ ಚಂದ್ರಶೇಖರ ಗೌಡ ಸ್ಕೂಟಿಯ ಸಮೇತ ನೆಲಕ್ಕೆ ಬಿದ್ದರೂ ಅದೃಷ್ಟವಶಾತ್‌ ಗಾಯವಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಗಾಯಾಳು ಶಂಕರ ಅವರನ್ನು ಮೊದಲು ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿಯ ಪಿ.ಜಿ. ಆಸ್ಪತ್ರೆಗೆ ಕರೆದೊಯ್ದಾಗ, ವೈದ್ಯರು ಪರೀಕ್ಷಿಸಿ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಸ್ಕೂಟಿ ಚಾಲಕ ಚಂದ್ರಶೇಖರ ಗೌಡ ಅವರು ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾದ ಆರೋಪದಡಿ ನರೂರು ಗ್ರಾಮದ ಓಮಿನಿ ಚಾಲಕ ಸದಾನಂದ ಬಸಪ್ಪ ಪಾಟೀಲ್ (68) ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share