ಬೆಂಗಳೂರು: ಬ್ಯಾಂಕ್ ಗ್ರಾಹಕರಿಗೆ ಪ್ರಮುಖ ಮಾಹಿತಿ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ದೇಶಾದ್ಯಂತ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದ್ದು, ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಸೆಪ್ಟೆಂಬರ್ 28ರಿಂದ 30ರವರೆಗೆ ಮೂರು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಎದುರಾಗಬಹುದಾದ ತೊಂದರೆ ಕಡಿಮೆ ಮಾಡಲು ಸೆಪ್ಟೆಂಬರ್ 27ರ ಭಾನುವಾರ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳನ್ನು ಕಾರ್ಯನಿರ್ವಹಿಸುವಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.
ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳಲ್ಲಿ ವಾರಕ್ಕೆ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿಗೊಳಿಸುವುದು ಪ್ರಮುಖವಾಗಿದೆ. ಇದರಂತೆ ಎಲ್ಲಾ ಶನಿವಾರಗಳನ್ನು ರಜೆಯನ್ನಾಗಿ ಘೋಷಿಸಬೇಕು ಎಂದು ನೌಕರರ ಸಂಘಟನೆಗಳು ಒತ್ತಾಯಿಸುತ್ತಿವೆ. ಪಿಂಚಣಿ ಸೇರಿದಂತೆ ಇತರ ಸೇವಾ ಸಂಬಂಧಿತ ಬೇಡಿಕೆಗಳೂ ಮುಷ್ಕರದ ಹಿನ್ನೆಲೆಯಲ್ಲಿ ಮುಂದಿಟ್ಟಿವೆ.
ಸೆಪ್ಟೆಂಬರ್ 26 ನಾಲ್ಕನೇ ಶನಿವಾರವಾಗಿದ್ದು, ಸಾಮಾನ್ಯವಾಗಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಸೆ.27 ಭಾನುವಾರವೂ ರಜೆಯಾಗಿರುವುದರಿಂದ ಅದರ ಬೆನ್ನಲ್ಲೇ ಸೆ.28ರಿಂದ 30ರವರೆಗೆ ಮುಷ್ಕರ ನಡೆದರೆ ಸತತ ಐದು ದಿನಗಳ ಕಾಲ ಶಾಖಾ ಮಟ್ಟದ ಬ್ಯಾಂಕಿಂಗ್ ಸೇವೆಗಳಿಗೆ ಅಡಚಣೆಯಾಗುವ ಸಾಧ್ಯತೆ ಇತ್ತು.
ಈ ಹಿನ್ನೆಲೆಯಲ್ಲಿ ಸೆ.27ರಂದು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳನ್ನು ಎಂದಿನಂತೆ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.
ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆಯ ಪ್ರಕಾರ, ಸೆ.27ರಂದು ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಿವೆ. RBI ಕೂಡ ಬ್ಯಾಂಕ್ ಶಾಖೆಗಳು, ಕಚೇರಿಗಳು, ATM-linked branches ಹಾಗೂ Currency Chests ಕಾರ್ಯನಿರ್ವಹಿಸಲು ಅನುಮತಿ ನೀಡಿದೆ. ಹೀಗಾಗಿ ಬ್ಯಾಂಕ್ ಶಾಖೆಗೆ ತೆರಳಿ ಮಾಡಬೇಕಿರುವ ಪ್ರಮುಖ ವಹಿವಾಟುಗಳಿದ್ದರೆ ಗ್ರಾಹಕರು ಸೆ.27ರಂದೇ ಪೂರ್ಣಗೊಳಿಸಿಕೊಳ್ಳಬಹುದು.
ಮುಷ್ಕರದ ಅವಧಿಯಲ್ಲಿ ಮುಖ್ಯವಾಗಿ ಶಾಖೆಗಳಲ್ಲಿ ನಡೆಯುವ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಚೆಕ್ ಕ್ಲಿಯರೆನ್ಸ್ ಸೇರಿದಂತೆ ಕೆಲವು ಬ್ಯಾಂಕಿಂಗ್ ಚಟುವಟಿಕೆಗಳು ವಿಳಂಬವಾಗಬಹುದು.
ಮತ್ತೊಂದೆಡೆ, ಡಿಜಿಟಲ್ ಬ್ಯಾಂಕಿಂಗ್, UPI, ಮೊಬೈಲ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ಮುಂದುವರಿಯುವ ನಿರೀಕ್ಷೆಯಿದೆ. ಆದರೆ ಮುಷ್ಕರದ ಸಂದರ್ಭದಲ್ಲಿ ನಿರ್ದಿಷ್ಟ ಸೇವೆಗಳ ಲಭ್ಯತೆ ಬ್ಯಾಂಕ್‌ಗನುಸಾರ ಬದಲಾಗಬಹುದು.
ಆದ್ದರಿಂದ ಸೆ.28ರಿಂದ 30ರವರೆಗೆ ಬ್ಯಾಂಕ್‌ಗೆ ನೇರವಾಗಿ ಭೇಟಿ ನೀಡಿ ಮಾಡಬೇಕಿರುವ ಪ್ರಮುಖ ಕೆಲಸಗಳಿದ್ದರೆ ಅವುಗಳನ್ನು ಮುಂಚಿತವಾಗಿಯೇ ಮುಗಿಸಿಕೊಳ್ಳುವುದು ಗ್ರಾಹಕರಿಗೆ ಅನುಕೂಲಕರವಾಗಲಿದೆ.


