Friday, March 13, 2026
HomeOthersನದಿ ಹರಿದು ಸಮುದ್ರವನ್ನೇ ಸೇರಬೇಕು!

ನದಿ ಹರಿದು ಸಮುದ್ರವನ್ನೇ ಸೇರಬೇಕು!

ಯಾವಾಗ ಎಲ್ಲಿ ಎಷ್ಟು ಗಾಳಿ ಬೀಸಬೇಕು, ಎಷ್ಟು ಮಳೆ ಸುರಿಯಬೇಕು, ಎಷ್ಟು ನೀರು ಹರಿಯುತ್ತಿರಬೇಕು ಎಂದು ಸ್ವರೂಪಿತಗೊಂಡ ಪ್ರಕೃತಿಯ ನಿರ್ಣಯಗಳ ಆಧಾರದ ಮೇಲೆಯೇ ಇಲ್ಲಿನ ಬೆಟ್ಟಗುಡ್ಡ, ಕಾಡು, ಕಾಡಿನೊಳಗಿನ ಪ್ರಾಣಿ ಪಕ್ಷಿ ಮತ್ತು ಒಟ್ಟಾರೆ ಜೀವವೈವಿಧ್ಯತೆ ಬದುಕಿಕೊಂಡಿದೆ.

ಶಿರಸಿ: ಸುಮಾರು ನಾಲ್ಕೈದು ದಶಕಗಳಿಂದ ಜಿಲ್ಲೆಯ ಎರಡು ಸಣ್ಣ ಸ್ವಚ್ಛ ನದಿಗಳಿಗೆ ಕಾಡುತ್ತಿರುವ ಅಣೆಕಟ್ಟಿನ ಸಂಕಟ ಈಗ ಮತ್ತೆ ಮೇಲೆದ್ದು ಮಲೆನಾಡು ಕರಾವಳಿ ಪರಿಸರದಲ್ಲಿ ಸಂಚಲನ ಸೃಷ್ಟಿಸಿದೆ. ಸುರಿದ ಮಳೆ ನೀರನ್ನು ಕುಡಿದು ಉಳಿಸಿಕೊಂಡು ಬೆಟ್ಟ ಗುಡ್ಡ ಕಾಡುಗಳು ಸ್ರವಿಸುವ ಪರಿಶುದ್ಧ ನೀರೊರತೆಯ ಮೇಲೆ, ಒಟ್ಟಾರೆ ಪರಿಸರ ಮತ್ತು ಜನಜೀವನದ ಮೇಲೆ ಮತ್ತೆ ಮತ್ತೆ ಕುರುಡು ಅಭಿವೃದ್ಧಿಯ ಕಣ್ಣು ಬೀಳುತ್ತಿರುವುದನ್ನು ಖೇದಕರ. ಅದನ್ನು ತಪ್ಪಿಸಲು ಸದ್ಯಕ್ಕೆ ಜನಸಾಮಾನ್ಯರು ಜಾಗೃತಿಗೊಳ್ಳುತ್ತಿರುವುದು ಸಮಾಧಾನದ ಸಂಗತಿ.

ಬೇಡ್ತಿ ಮತ್ತು ಅಘನಾಶಿನಿ ನದಿ ಕಣಿವೆಯ ಮಳೆಗಾಲ ಸಮೃದ್ಧವಾಗಿದ್ದು, ನೀರು ತುಂಬಿ ತುಂಬಿ ಹರಿದು ಕಡಲು ಸೇರುತ್ತದೆ ಎಂಬುದು ನಿಜ. ಆದರೆ ಮಳೆಗಾಲದಲ್ಲಿ ಸುರಿವ ಮಳೆ ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆಯಾದರೂ  ಮಲೆನಾಡು ಮತ್ತು ಘಟ್ಟ ಪ್ರದೇಶದಲ್ಲಿ ನೀರಿನ ಕೊರತೆ ಕಾಣುತ್ತದೆ. ಹೆಚ್ಚು ಮಳೆ ಸುರಿಯುವ ಮಲೆನಾಡು ಮತ್ತು ಪಶ್ಚಿಮ ಘಟ್ಟದ ನೈಸರ್ಗಿಕ ವ್ಯವಸ್ಥೆಯೇ ಅಂಥಾದ್ದು, ಸುರಿದ ಮಳೆ ನೀರನ್ನು ಇಲ್ಲಿ ಸಂಗ್ರಹಿಸುವುದು ಅಸಾಧ್ಯ. ಅದು ಸದಾ ಹರಿಯುತ್ತಲೇ ಇರಬೇಕು. ಸದಾ ಹರಿಯುವಷ್ಟು ಮಳೆ ಸುರಿಯುತ್ತಲೇ ಇರಬೇಕು. ಇದೊಂದು ನೈಸರ್ಗಿಕ ಅನಿವಾರ್ಯತೆ, ಪಶ್ಚಿಮ ಘಟ್ಟದ ನೈಸರ್ಗಿಕ ಪ್ರತಿಧ್ವನಿ ವ್ಯವಸ್ಥೆ (Echo system).

ಯಾವಾಗ ಎಲ್ಲಿ ಎಷ್ಟು ಗಾಳಿ ಬೀಸಬೇಕು, ಎಷ್ಟು ಮಳೆ ಸುರಿಯಬೇಕು, ಎಷ್ಟು ನೀರು ಹರಿಯುತ್ತಿರಬೇಕು ಎಂದು ಸ್ವರೂಪಿತಗೊಂಡ ಪ್ರಕೃತಿಯ ನಿರ್ಣಯಗಳ ಆಧಾರದ ಮೇಲೆಯೇ ಇಲ್ಲಿನ ಬೆಟ್ಟಗುಡ್ಡ, ಕಾಡು, ಕಾಡಿನೊಳಗಿನ ಪ್ರಾಣಿ ಪಕ್ಷಿ ಮತ್ತು ಒಟ್ಟಾರೆ ಜೀವವೈವಿಧ್ಯತೆ ಬದುಕಿಕೊಂಡಿದೆ. ಜಾಗತಿಕ ತಾಪಮಾನ, ರೈಲು, ರಸ್ತೆ, ವಿದ್ಯುತ್ ಯೋಜನೆಗಳು ಮೊದಲಾದವುಗಳಿಂದ ಈಗಾಗಲೇ ಈ ವ್ಯವಸ್ಥೆ ಅಡಚಣೆಗೊಂಡು ಹವಾಮಾನದ ಹಲವು ವ್ಯತ್ಯಾಸಗಳು ಕಂಡುಬರುತ್ತಿದ್ದು, ಈಗ ಉಳಿದಿರುವುದನ್ನಾದರೂ ಉಳಿಸಿಕೊಳ್ಳುವ ಜವಾಬ್ದಾರಿ ಮತ್ತು ಹೊಣೆ ಜಿಲ್ಲೆಯ ಜನರ ಮೇಲಿದೆ.

ಅದಿಲ್ಲದಿದ್ದರೆ ಗ್ರಾಮೀಣ ಪ್ರದೇಶದ ಜನರನ್ನೆಲ್ಲ ಶಹರಗಳಿಗೆ ತಿರುಗಿಸಿ, ಮಲೆನಾಡ ಹಳ್ಳಿಗಳು ವೃದ್ಧಾಶ್ರಮವಾಗುತ್ತಿರುವ ಊರುಗಳೇ ಖಾಲಿಯಾಗಿ ಭಣಗುಡುತ್ತಿರುವ ಹಾಗೆಯೇ  ಇಂತಹ ನದಿ ತಿರುವು ಯೋಜನೆಗಳು ಕ್ರಮೇಣ ಮಲೆನಾಡು ಮತ್ತು ಪಶ್ಚಿಮ ಘಟ್ಟ ಪ್ರದೇಶವನ್ನು ಮರಳುಗಾಡಾಗಿಸಿದರೂ ಆಶ್ಚರ್ಯವಿಲ್ಲ.

ನಾಡಿನ ಬಯಲು ಸೀಮೆ ಮತ್ತು ಇನ್ನಿತರ ಭಾಗಗಳಲ್ಲಿ ಕೆರೆ ಜಲಾಶಯಗಳ ಮೂಲಕ ಮಳೆನೀರು ಸಂಗ್ರಹ ಬಹುತೇಕ ಯಶಸ್ವಿಯಾಗುತ್ತದೆ. ಆದರೆ ಕೆಲವೇ ಕೆಲವು ಸಮತಟ್ಟು ಪ್ರದೇಶಗಳಲ್ಲಿ ಬಿಟ್ಟರೆ ಮಲೆನಾಡು ಮತ್ತು ಘಟ್ಟ ಪ್ರದೇಶಗಳಲ್ಲಿ ಮಳೆ ನೀರನ್ನು ಉಳಿಸಿಕೊಳ್ಳುವುದು ಅಸಾಧ್ಯ. ಯಾಕೆಂದರೆ ಇಲ್ಲಿನ ಮಳೆಯ ಅಬ್ಬರವೇ ಅಂಥಾದ್ದು. ಇತ್ತೀಚೆಗೆ ಹಲವು ಕಡೆ ಅರಣ್ಯ ಇಲಾಖೆ ಇಂಗುಗುಂಡಿ ಹೆಸರಿನಲ್ಲಿ ತೋಡಿದ ದೈತ್ಯ ಗುಂಡಿ ಹೊಂಡಗಳು ಒಡೆದು ಕೊಚ್ಚಿಹೋದ ಉದಾಹರಣೆ ಅಲ್ಲಲ್ಲಿ ಕಾಣಿಸುತ್ತಿದೆ. ಹಾಗೆ ಸಹಜತೆಯನ್ನು ಮೀರಿ ಬಲವಂತವಾಗಿ ಸಂಗ್ರಹಿಸಲು ಹರಿವನ್ನು ತಿರುಗಿಸಲು ಪ್ರಯತ್ನಿಸಿದರೆ ಭೂಕುಸಿತ ಮತ್ತು ನೆಲ ಕೊರೆತದ ಅಪಾಯ ಖಂಡಿತ. ಒಂದೆಡೆ ಅಣೆಕಟ್ಟು-ಬ್ಯಾರೇಜ್ ಮತ್ತು ನದಿತಿರುವಿಗಾಗಿ ಮರಗಿಡ ಕಾಡು ನಾಶವಾದರೆ ಮುಂದೆ ನಿಧಾನವಾಗಿ ನದಿ ನೀರು ಹರಿವಿನ ಕೊರತೆಯಿಂದ ಹಾಗೇ ಭೂಕುಸಿತ ಕೊರೆತದಂತಹ ಕಾರಣದಿಂದಲೂ ಪರಿಸರ ನಾಶ ಕಟ್ಟಿಟ್ಟ ಬುತ್ತಿ.

ಆರಂಭದಲ್ಲಿ ಈಗ ಮಿನಿ ಡ್ಯಾಂ, ಸಣ್ಣ ಯೋಜನೆ ಎಂದು ಸಿದ್ಧಗೊಳ್ಳುವ ಇಂತಹ ನದಿ ಅಣೆಕಟ್ಟು ಯೋಜನೆಗಳು ಕ್ರಮೇಣ ವಿಸ್ತಾರಗೊಳ್ಳುತ್ತ ಎತ್ತರವಾಗುತ್ತ ಮತ್ತೆ ಮತ್ತೆ ಹೊಸ ರೂಪ ಪಡೆಯುತ್ತ ಆಯಾ ನದಿ ಕಣಿವೆಯನ್ನೇ ಮುಳುಗಿಸುವುದು ಖಂಡಿತ. ಉದಾಹರಣೆಯಾಗಿ ಕಾಳಿ ಮತ್ತು ಶರಾವತಿ ನದಿ ಯೋಜನೆಗಳು ನಮ್ಮ ಕಣ್ಣ ಮುಂದಿವೆ. (ಕೈಗಾ ಅಣುಸ್ಥಾವರ ಕೂಡಾ ಮತ್ತೆ ಮತ್ತೆ ಬೆಳೆಯುತ್ತಿದೆ.)

ನಮ್ಮ ಜಿಲ್ಲೆ ಶೇ. 79ಕ್ಕೂ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದ್ದು, ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳ ಮಲೆನಾಡು ಪ್ರದೇಶ, ಪಶ್ಚಿಮಘಟ್ಟ ಮತ್ತು ಘಟ್ಟದಂಚಿನ ಕರಾವಳಿ ಭಾಗದಲ್ಲಿ ಪಹಣಿ ಹೊಂದಿರುವ ಕಂದಾಯ ಭೂಮಿ ಬಹಳ ಕಡಿಮೆಯಿದೆ. ಹಲವು ಜನ ಸಮುದಾಯಗಳು ಅಲ್ಲಲ್ಲಿ ಅರಣ್ಯ ಅತಿಕ್ರಮಣ, ಸರ್ಕಾರಿ ಬೆಟ್ಟ, ಗೋಮಾಳ, ಬಗರ್ ಹುಕುಂಗಳಲ್ಲಿ ಸಾಗುವಳಿ ಮತ್ತು ವಸತಿ ಮಾಡಿಕೊಂಡು ಬದುಕುತ್ತಿದ್ದಾರೆ. ಅಣೆಕಟ್ಟು, ಜಲಾಶಯ, ಮುಳುಗಡೆ ಮತ್ತು ಇನ್ನಾವುದೇ ಅಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ ಸಿಲುಕಿಕೊಂಡರೆ ಅಂತಹ ಬಡ ಜನ ಸಮುದಾಯ ಕಳೆದುಕೊಳ್ಳುವ ನೆಲಕ್ಕೆ ಪರಿಹಾರ ಪಡೆಯುವ ಅನುಕೂಲವೂ ಇಲ್ಲದೆ ನಿರ್ಗತಿಕರಾಗುವ ದೊಡ್ಡ ಅಪಾಯವಿದೆ.

ಪರಿಸರ ತಜ್ಞರು, ವಿಜ್ಞಾನಿಗಳಿಂದ ಅಲ್ಲದೆ ವಿಶ್ವಸಂಸ್ಥೆಯಿಂದ ಸಹಾ ಭಾರತ ಉಪಖಂಡದಲ್ಲಿ ಈಗಾಗಲೇ ಹೆಚ್ಚುತ್ತಿರುವ ಅಣೆಕಟ್ಟು ಜಲಾಶಯ ಮೊದಲಾದವುಗಳಿಂದ ಮಳೆ ಮಾರುತಗಳ ಮೇಲೆ, ಒಟ್ಟಾರೆ ಹವಾಮಾನದ ಮೇಲೆ ತೀವ್ರ ಪರಿಣಾಮ ಉಂಟಾಗಲಿದೆ ಎಂಬ ಎಚ್ಚರಿಕೆ ಹಲವು ವರ್ಷಗಳಿಂದ ಕೇಳಿಸುತ್ತಲೇ ಬಂದಿದೆ. ಆದರೂ ನಮ್ಮ ಕುರುಡು ಅಭಿವೃದ್ಧಿಯ ಅಪೇಕ್ಷೆ ಹಲವು ರೂಪಗಳಲ್ಲಿ ನಗರೀಕರಣದತ್ತ ಹೆಚ್ಚು ಒತ್ತು ಕೊಡುತ್ತ ಎಲ್ಲವನ್ನೂ ತನ್ನದೇ ವೈಜ್ಞಾನಿಕ ಮತ್ತು ರಾಜಕೀಯ ನಿರ್ಣಯಗಳನ್ನು ಬೆಳೆಸಿಕೊಂಡು ಹೋಗುತ್ತಿದೆ.

 ಈಗಾಗಲೇ ಬೇಡ್ತಿ ಮತ್ತು ಅಘನಾಶಿನಿ ನದಿಗಳ ರಕ್ಷಣೆಗೆ ರೂಪುಗೊಂಡು ಸಾಗುತ್ತಿರುವ ಹೋರಾಟದ ಹಾದಿಗಳು ಇನ್ನಷ್ಟು ಸದೃಢವಾಗಿ, ರಾಜಕೀಯ ಇಚ್ಛಾಶಕ್ತಿಯಾಗಿ ಬೆಳೆದು ಇನ್ನೆಂದೂ ಅಣೆಕಟ್ಟು, ನದಿ ತಿರುವಿನಂತಹ ಯೋಜನೆಗಳು ನಮ್ಮ ಅಘನಾಶಿನಿಗೆ ನಮ್ಮ ಬೇಡ್ತಿಗೆ ಬಾರದಿರುವಂತಹ ಕಾನೂನಾಗಲಿ ಎಂಬುದು ಎಲ್ಲರ ಅಪೇಕ್ಷೆಯಾಗಿದೆ.

 – ಗಣೇಶ ಹೊಸ್ಮನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share