ಯಲ್ಲಾಪುರ: ಬೇಡ್ತಿ–ಗಂಗಾವಳಿ–ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ಹೋರಾಟ ತೀವ್ರಗೊಳಿಸುವ ಉದ್ದೇಶದಿಂದ ನ.3ರಂದು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲು ನಿರ್ಧರಿಸಲಾಗಿದ್ದು, 10ರಿಂದ 12 ಸಾವಿರ ಜನರನ್ನು ಸೇರಿಸಿ ಬೃಹತ್ ಜನಾಂದೋಲನ ನಡೆಸಲು ಗುರಿ ನಿಗದಿಪಡಿಸಲಾಗಿದೆ.
ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ಯಲ್ಲಾಪುರದಲ್ಲಿ ಶನಿವಾರ ನಡೆದ 2ನೇ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಪ್ರತಿಭಟನೆ, ಪತ್ರ ಚಳವಳಿ, ಮನವಿ ಸೇರಿದಂತೆ ಹಲವು ಹಂತಗಳ ಹೋರಾಟಗಳ ಮೂಲಕ ಸರ್ಕಾರಗಳ ಗಮನ ಸೆಳೆಯಲಾಗಿದ್ದರೂ ಯೋಜನೆಯನ್ನು ಕೈಬಿಡುವ ಕುರಿತು ಯಾವುದೇ ಪ್ರಸ್ತಾಪವಾಗಿಲ್ಲ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟವನ್ನು ತೀವ್ರಗೊಳಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ರಸ್ತಾ ರೋಕೋ ಹೋರಾಟದ ಸಂಘಟನೆ ಹಾಗೂ ಪೂರ್ವಸಿದ್ಧತೆಗಾಗಿ ಯಲ್ಲಾಪುರ ರಸ್ತಾ ತಡೆ ಸಂಚಾಲನಾ ಸಮಿತಿ ರಚಿಸಲಾಯಿತು. ಟಿಎಂಎಸ್ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಹಾಗೂ ಹರಿಪ್ರಕಾಶ್ ಕೋಣೆಮನೆ ಅವರನ್ನು ಪ್ರಧಾನ ಸಂಚಾಲಕರನ್ನಾಗಿ, ಯಲ್ಲಾಪುರ ತಾಲೂಕು ಹಾಗೂ ಹಳವಳ್ಳಿ ಭಾಗ ಸೇರಿದಂತೆ ವಿವಿಧ ಪ್ರದೇಶಗಳ 30 ಜನರನ್ನು ಸಂಚಾಲಕರನ್ನಾಗಿ ನೇಮಕ ಮಾಡಲಾಯಿತು.
ಮುಂದಿನ ಕಾರ್ಯಸ್ವರೂಪ ಮತ್ತು ವಿವಿಧ ಜವಾಬ್ದಾರಿಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉಪಸಮಿತಿಗಳನ್ನು ರಚಿಸಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಸಮಾಲೋಚನೆ ನಡೆದಿದ್ದು, ನ.3ರಂದು ನಡೆಯಲಿರುವ ರಸ್ತೆ ತಡೆಗೆ 10ರಿಂದ 12 ಸಾವಿರ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ.
ಕದಂಬ ಸಂಸ್ಥೆಯ ವಿಶ್ವೇಶ್ವರ ಕೋಟೆಮನೆ ಅವರು ಸಮಿತಿಯ ರಚನೆ, ಕಾರ್ಯವ್ಯಾಪ್ತಿ ಹಾಗೂ ಸಂಘಟನೆಯ ವಿಧಾನದ ಕುರಿತು ವಿವರಿಸಿದರು. ಕೊಳ್ಳ ಸಮಿತಿಯ ಸಂಚಾಲಕರಾದ ವಿಶ್ವನಾಥ ಹೆಗಡೆ ಶೀಗೆಹಳ್ಳಿ ಹಾಗೂ ಜಿ.ಆರ್. ಹೆಗಡೆ ಬೆಳ್ಳೆಕೇರಿ ಅವರು ಮುಂದಿನ ಹೋರಾಟದ ಸ್ವರೂಪದ ಕುರಿತು ಮಾತನಾಡಿದರು.
ಸಭೆಯಲ್ಲಿ ಉಮೇಶ ಭಾಗ್ವತ ಕಳಚೆ, ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ರಾಘವೇಂದ್ರ ಭಟ್ಟ ಹಾಸಣಗಿ, ಅಪ್ಪು ಆಚಾರಿ, ಭಾಸ್ಕರ ಸಿದ್ದಿ ಕಂಪ್ಲಿ, ವೆಂಕಟ್ರಮಣ ಕಿರಕುಂಭತ್ತಿ, ಎಂ.ಕೆ. ಭಟ್ಟ ಯಡಳ್ಳಿ, ವಿಶ್ವನಾಥ ಬಾವಣಕೊಪ್ಪ, ಜಾನು ಘಾಡಿ, ಅನಂತ ಗಾಂವ್ಕಾರ್ ಕಂಚೀಪಾಲ್, ಮಹೇಶ ಕುಣಬಿ, ಗಣೇಶ ಕುಣಬಿ ಕೈಗಡಿ, ಶಶಾಂಕ ಹೆಗಡೆ, ಕೆ.ಟಿ. ಹೆಗಡೆ, ಕಾವೇರಿ ಭಾಗ್ವತ್, ಪ್ರಸಾದ ಹೆಗಡೆ, ಗಣಪತಿ ಬೋಳಗುಡ್ಡೆ, ನಾಗರಾಜ ಸಿದ್ದಿ, ವಿಶ್ವನಾಥ ಹಳೆಮನೆ, ರಘುಪತಿ ಕಂಪ್ಲಿ, ಮಂಜುನಾಥ ಆಚಾರಿ, ಕೆ.ಟಿ. ಹೆಗಡೆ ಚಿಕ್ಕೊರಗಿ, ವಿಘ್ನೇಶ್ವರ ಕಟ್ಟೆಗದ್ದೆ, ವೆಂಕಟ್ರಮಣ ಬೆಳ್ಳಿ ಹಾಗೂ ಕೊಳ್ಳ ಸಮಿತಿಯ ಸಂಚಾಲಕ ನರಸಿಂಹ ಸಾತೊಡ್ಡಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
