ನದಿ ತಿರುವು ಯೋಜನೆ ವಿರೋಧಿಸಿ ನ.3ರಂದು ಯಲ್ಲಾಪುರದಲ್ಲಿ ಹೆದ್ದಾರಿ ತಡೆಗೆ ನಿರ್ಧಾರ
ಯಲ್ಲಾಪುರ: ಬೇಡ್ತಿ–ವರದಾ ನದಿ ತಿರುವು ಹಾಗೂ ಗಂಗಾವಳಿ–ಅಘನಾಶಿನಿ ಯೋಜನೆಗಳನ್ನು ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನಿರ್ಧರಿಸಿದೆ.
ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಗುರುವಾರ ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ಹೋರಾಟದ ರೂಪುರೇಷೆಗಳ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಇದುವರೆಗೆ ಸಾತ್ವಿಕವಾಗಿ ವಿವಿಧ ರೀತಿಯ ಹೋರಾಟಗಳನ್ನು ನಡೆಸಲಾಗಿದೆ. ಶಿರಸಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ, ಪತ್ರ ಚಳವಳಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿದಂತೆ ಸಂಬಂಧಿತ ಇಲಾಖೆಗಳು ಮತ್ತು ಜಿಲ್ಲೆಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುವ ಮೂಲಕ ಯೋಜನೆಗೆ ವಿರೋಧ ವ್ಯಕ್ತಪಡಿಸಲಾಗಿದೆ. ಆದರೂ ಯೋಜನೆಯನ್ನು ಕೈಬಿಡುವ ಕುರಿತು ಸರ್ಕಾರದಿಂದ ಸ್ಪಷ್ಟ ಕ್ರಮ ಕಂಡುಬರುತ್ತಿಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗಿಳಿದು ಹೋರಾಟ ನಡೆಸಬೇಕು. ಅದರ ಭಾಗವಾಗಿ ನವೆಂಬರ್ 3ರಂದು ಬೆಳಗ್ಗೆ 10 ಗಂಟೆಯಿಂದ ಯಲ್ಲಾಪುರ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು. ಪಟ್ಟಣದ ಎಪಿಎಂಸಿ ಬಳಿ ಪ್ರತಿಭಟನಾಕಾರರು ಸೇರಿ, ಅಲ್ಲಿಂದ ಮೆರವಣಿಗೆಯಲ್ಲಿ ತೆರಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಣಿ ನಡೆಸಲಿದ್ದಾರೆ. ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ವಿವಿಧ ಸಮುದಾಯಗಳವರು ಹಾಗೂ ನದಿ ಕಣಿವೆ ಪ್ರದೇಶಗಳ ಸಾರ್ವಜನಿಕರು ಸೇರಿದಂತೆ 10 ಸಾವಿರಕ್ಕೂ ಅಧಿಕ ಜನರನ್ನು ಪ್ರತಿಭಟನೆಯಲ್ಲಿ ಸೇರಿಸುವ ಉದ್ದೇಶವನ್ನು ಸಮಿತಿ ಹೊಂದಿದೆ ಎಂದು ತಿಳಿಸಿದರು.
ಜಿಲ್ಲೆಯ ಶಾಸಕರು, ಸಂಸದರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳನ್ನು ಪ್ರತಿಭಟನೆಗೆ ಆಹ್ವಾನಿಸಿ, ಪಕ್ಷಾತೀತವಾಗಿ ಬೆಂಬಲಿಸಿ ಪಾಲ್ಗೊಳ್ಳುವಂತೆ ಮನವಿ ಮಾಡಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಈಗಾಗಲೇ ಹಲವು ಹಂತಗಳಲ್ಲಿ ಹೋರಾಟ ನಡೆದಿದ್ದರೂ ಸರ್ಕಾರ ತನ್ನ ಕ್ರಮದಿಂದ ಹಿಂದೆ ಸರಿಯುತ್ತಿಲ್ಲ. ಹೀಗಾಗಿ ಹೋರಾಟವನ್ನು ಮತ್ತಷ್ಟು ವ್ಯಾಪಕಗೊಳಿಸಬೇಕು. ಯುವಕರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಪ್ರತಿಭಟನೆಯ ವಿಚಾರ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವಂತಾಗಬೇಕು ಎಂದು ಸಲಹೆ ನೀಡಿದರು.
ದೀಪಕ ದೊಡ್ಡೂರು ಮಾತನಾಡಿ, ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟಕ್ಕೆ ಜನರ ಬೆಂಬಲವಿದೆ. ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರನ್ನೂ ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ಆಹ್ವಾನಿಸಬೇಕು ಎಂದು ಹೇಳಿದರು. ರಾಘವ ಭಟ್ಟ ಹಾಸಣಗಿ ಅವರು ಜಿಲ್ಲೆಯ ವಿವಿಧ ಭಾಗಗಳಿಂದ ಜನರನ್ನು ಪ್ರತಿಭಟನೆಗೆ ಕರೆತರುವ ಕುರಿತು ವಿವರಿಸಿದರು. ಹಿರಿಯ ಸಹಕಾರಿ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಮಾತನಾಡಿ, ಬೀದಿಗಿಳಿದು ಹೋರಾಟ ನಡೆಸುವುದು ಅಗತ್ಯವಾಗಿದ್ದು, ಯಾವುದೇ ಹಿಂಜರಿಕೆ ಬೇಡ ಎಂದರು.
ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ತಡೆ ಮೂಲಕ ಪರಿಣಾಮಕಾರಿ ಹೋರಾಟ ನಡೆಸಬೇಕು. ಯುವಕರು, ಮಹಿಳೆಯರು ಹಾಗೂ ಎಲ್ಲ ಸಮುದಾಯಗಳವರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸ್ಥಳೀಯ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ, ಸಿದ್ಧತೆಗಳನ್ನು ಕೈಗೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದರು.
ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಸರ್ಕಾರದ ಮಟ್ಟದಲ್ಲಿ ಯೋಜನೆಯನ್ನು ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಗಂಭೀರ ಪ್ರಯತ್ನಗಳು ನಡೆಯಬೇಕು ಎಂದು ಅವರು ಹೇಳಿದರು.
ಇದರ ಜೊತೆಗೆ ಅಕ್ಟೋಬರ್ 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೇಡ್ತಿ–ಅಘನಾಶಿನಿ–ಗಂಗಾವಳಿ ಯೋಜನೆಗಳ ವಿರುದ್ಧ ಬೃಹತ್ ಧರಣಿ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕನ್ನಡ ಜಿಲ್ಲೆಯವರೂ ಧರಣಿಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಕೈಜೋಡಿಸಬೇಕು ಎಂದು ಅನಂತ ಹೆಗಡೆ ಅಶೀಸರ ಮನವಿ ಮಾಡಿದರು.
ಸಭೆಯಲ್ಲಿ ಟಿಎಂಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ, ಕೊಳ್ಳ ಸಮಿತಿಯ ಪ್ರಮುಖರಾದ ವಿಶ್ವನಾಥ ಹೆಗಡೆ ಶೀಗೇಹಳ್ಳಿ, ರಮೇಶ ದುಬಾಶಿ ಶಿರಸಿ, ಸೀಮಾಧ್ಯಕ್ಷ ನಾಗೇಶ ಪಣತಗೇರಿ, ಪ್ರಮೋದ ವೈದ್ಯ ಮತ್ತಿಘಟ್ಟಾ, ವೆಂಕಟ್ರಮಣ ಭಟ್ಟ ಕಿರಕುಂಭತ್ತಿ, ವೆಂಕಟ್ರಮಣ ಬೆಳ್ಳಿ, ವಿಶ್ವನಾಥ ಹಳೆಮನೆ, ಡಾ. ರವಿ ಭಟ್ಟ, ಚನ್ನಪ್ಪ ಗೌಡ, ಉಮೇಶ ಭಾಗ್ವತ ಕಳಚೆ, ಆರ್.ವಿ. ಹೆಗಡೆ, ರಘುಪತಿ ಕಂಪ್ಲಿ, ಉಮೇಶ ಭಾಗ್ವತ್ ಕಂಚನಳ್ಳಿ, ಭಾಸ್ಕರ ಸಿದ್ದಿ, ಸುಬ್ಬಣ್ಣ ಬೋಳ್ಮನೆ, ಎಸ್.ವಿ.ಟಿ., ಟಿ.ಆರ್. ಹೆಗಡೆ, ವಿ.ಟಿ. ತೊಂಡೆಕೆರೆ, ಎಂ.ಕೆ.ಭಟ್ ಯಡಳ್ಳಿ, ನಾಗರಾಜ ಕವಡಿಕೆರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಚಾಲಕ ನರಸಿಂಹ ಸಾತೊಡ್ಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.