ಶಿರಸಿ: ಬೆಂಗಳೂರು ಮತ್ತು ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಸಲ್ಲಿಸಿದ್ದ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದ್ದು, ಮಡಗಾಂವ್–ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಯಶವಂತಪುರದವರೆಗೆ ವಿಸ್ತರಿಸಿರುವುದಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ಬೆಂಗಳೂರು ಮತ್ತು ಮಡಗಾಂವ್ ನಡುವೆ ಹೊಸದಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸುವಂತೆ ಮಾರ್ಚ್ 11, 2026ರಂದು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದೆ.
ಇದೀಗ ಕೇಂದ್ರ ಸರ್ಕಾರ ಹಾಗೂ ರೈಲ್ವೆ ಸಚಿವರು ಬೇಡಿಕೆಯನ್ನು ಪರಿಗಣಿಸಿ ಮಡಗಾಂವ್–ಮಂಗಳೂರು ವಂದೇ ಭಾರತ್ ರೈಲನ್ನು ಮುರ್ಡೇಶ್ವರ, ಗೋಕರ್ಣ ಹಾಗೂ ಕಾರವಾರ ಮಾರ್ಗವಾಗಿ ಬೆಂಗಳೂರಿನವರೆಗೆ ವಿಸ್ತರಿಸಿ ಆದೇಶಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪರಿಷ್ಕೃತ ವೇಳಾಪಟ್ಟಿಯೊಂದಿಗೆ ರೈಲು ಸಂಖ್ಯೆ 26655/26656 ಯಶವಂತಪುರ–ಮಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿ ರೈಲು ಸಂಚರಿಸಲಿದೆ. ಇದರಿಂದ ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಕನ್ನಡ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತರು ಹಾಗೂ ಪ್ರವಾಸೋದ್ಯಮಕ್ಕೂ ಸಹಕಾರಿಯಾಗಲಿದೆ ಎಂದು ಕಾಗೇರಿ ಹೇಳಿದ್ದಾರೆ.
ಈ ಮಹತ್ವದ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಕ್ಷೇತ್ರದ ಜನರ ಪರವಾಗಿ ಹೃತ್ಪೂರ್ವಕ ಧನ್ಯವಾದ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.


