ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವೆಂಕಟಾಪುರ ಗ್ರಾಮದ ಮುರಿನಕಟ್ಟೆ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಿರುವ ಮುರಿನಕಟ್ಟೆ ಪ್ರದೇಶದಲ್ಲಿ ಸ್ಥಳಾಂತರ ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ಆದೇಶ ಹೊರಡಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪಕ್ಕದಲ್ಲಿರುವ ಸರ್ಕಾರಿ ಜಾಗಕ್ಕೆ ಸ್ಥಳಾಂತರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಭಟ್ಕಳ ಶಹರ ಠಾಣೆ ಪೊಲೀಸರು ವರದಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಭಟ್ಕಳ ಉಪವಿಭಾಗ ದಂಡಾಧಿಕಾರಿಗಳು ಭಟ್ಕಳ ನಗರ ಹಾಗೂ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇ 25ರ ಬೆಳಿಗ್ಗೆ 6 ಗಂಟೆಯಿಂದ ಮೇ 27ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.
ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯಾಗುವ ಆತಂಕ ಮತ್ತು ಜನರು ಗುಂಪು ಸೇರಿ ಅಹಿತಕರ ಘಟನೆಗಳಿಗೆ ಕಾರಣವಾಗುವ ಸಾಧ್ಯತೆಯನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ನಿಷೇಧಾಜ್ಞೆ ಅವಧಿಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ಗುಂಪು ಸೇರುವುದನ್ನು ತಪ್ಪಿಸಿ, ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ಆಡಳಿತ ಮನವಿ ಮಾಡಿದೆ.