ಲಕ್ಷ್ಮೇಶ್ವರ: ಗದಗ ಜಿಲ್ಲೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತದ ದಾಳಿ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರನ್ನು 5 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಬಲೆಗೆ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಲೋಕಾಯುಕ್ತ ತಂಡವು ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಬಾಲಾಜಿ ಆಸ್ಪತ್ರೆಯ ಮೇಲೆ ಶನಿವಾರ ದಾಳಿ ನಡೆಸಿತು. ಈ ಆಸ್ಪತ್ರೆ ಡಾ. ಲಮಾಣಿ ಅವರ ಒಡೆತನದಲ್ಲಿದ್ದು, ಅವರು ವೃತ್ತಿಯಿಂದ ವೈದ್ಯರಾಗಿದ್ದಾರೆ.
ಅಧಿಕಾರಿಗಳ ಪ್ರಕಾರ, ವಿಜಯ್ ಎಂಬ ಉದ್ಯಮಿಯಿಂದ 5 ಲಕ್ಷ ರೂಪಾಯಿ ನಗದು ಸ್ವೀಕರಿಸುತ್ತಿದ್ದಾಗ ಶಾಸಕರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಶಾಸಕರ ಇಬ್ಬರು ಪಿಎಗಳಾದ ಮಂಜುನಾಥ್ ಹಾಗೂ ಗುರು ಅವರನ್ನೂ ವಶಕ್ಕೆ ಪಡೆಯಲಾಗಿದೆ.
ಪ್ರಾಥಮಿಕ ಮಾಹಿತಿಯಂತೆ, ಶಿರಹಟ್ಟಿ ಕ್ಷೇತ್ರದ ರಸ್ತೆ ಕಾಮಗಾರಿಗಳ ಬಿಲ್ಗಳು ಬಿಡುಗಡೆ ಮಾಡಲು ಹಾಗೂ ಮುಂದಿನ ಕಾಮಗಾರಿಗಳಿಗೆ ಅನುಮತಿ ನೀಡಲು ಒಟ್ಟು 11 ಲಕ್ಷ ರೂಪಾಯಿ ಲಂಚ ಬೇಡಿಕೆ ಇಡಲಾಗಿತ್ತು. ಅದರಲ್ಲಿ ಮೊದಲ ಕಂತಾಗಿ 5 ಲಕ್ಷ ರೂಪಾಯಿ ಕಮಿಷನ್ ಸ್ವೀಕರಿಸುವಾಗಲೇ ಲೋಕಾಯುಕ್ತ ತಂಡ ದಾಳಿ ನಡೆಸಿದೆ ಎನ್ನಲಾಗಿದೆ.
“ಶಾಸಕರು ಬಿಲ್ ಕ್ಲಿಯರ್ ಮಾಡಲು ಮತ್ತು ರಸ್ತೆ ಕಾಮಗಾರಿಗಳಿಗೆ ಸಹಕಾರ ನೀಡಲು ಕಮಿಷನ್ ಬೇಡಿಕೆ ಇಟ್ಟಿದ್ದರು. ನಮಗೆ ಬಂದ ದೂರಿನ ಆಧಾರದಲ್ಲಿ ದಾಳಿ ನಡೆಸಿದ್ದು, ವ್ಯವಹಾರ ನಡೆಯುತ್ತಿರುವಾಗಲೇ ಅವರನ್ನು ಬಂಧಿಸಲಾಗಿದೆ,” ಎಂದು ಲೋಕಾಯುಕ್ತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತರನ್ನು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ವಶಪಡಿಸಿಕೊಂಡ 5 ಲಕ್ಷ ರೂಪಾಯಿ ನಗದು ಮತ್ತು ರಸ್ತೆ ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಇದೇ ವೇಳೆ ಶಾಸಕರ ನಿವಾಸ ಹಾಗೂ ಸಂಬಂಧಿತ ಸ್ಥಳಗಳಲ್ಲೂ ಶೋಧ ಕಾರ್ಯ ಮುಂದುವರಿದಿದೆ.
ಈ ಘಟನೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ತನಿಖಾ ವಿವರಗಳಿಗಾಗಿ ಎಲ್ಲರ ಕಣ್ಣು ಲೋಕಾಯುಕ್ತದತ್ತ ನೆಟ್ಟಿದೆ.