ಅಂಕೋಲಾ: ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ಸೈನಿಕ ಸೇರಿದಂತೆ ಮೂವರು ಗಾಯಗೊಂಡ ಘಟನೆ ಅಂಕೋಲಾ ತಾಲೂಕಿನ ಸುಂಕಸಾಳ ಶಾಲೆ ಸಮೀಪ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಸೆ.17ರಂದು ನಡೆದಿದೆ.
ಸಂಜೆ ಸುಮಾರು 4 ಗಂಟೆ ವೇಳೆಗೆ ಕಾರು ಸಂಖ್ಯೆ ಕೆಎ-03/ಎನ್ವೈ-8370ರ ಚಾಲಕ ಪರಶುರಾಮನ್ ಕೆ ಕಾರನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದರು. ಈ ವೇಳೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿದ ಪರಿಣಾಮ ಸುಂಕಸಾಳ ಶಾಲೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರು ಬಲಭಾಗಕ್ಕೆ ಚಲಿಸಿದೆ. ಅದೇ ಸಮಯದಲ್ಲಿ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ಸಂಖ್ಯೆ 25 BH 5664 Bಗೆ ಕಾರು ಎದುರಿನಿಂದ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಪಘಾತದಲ್ಲಿ ಬೈಕ್ ಸವಾರ, ಪುಣೆಯ ಸೈನಿಕ ಪ್ರದ್ಯುಮ್ನ ಶರ್ಮಾ (26) ಅವರ ಬಲಗಾಲು ಹಾಗೂ ಬಲಕೈಗೆ ಗಾಯಗಳಾಗಿವೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಕುರಿಯನ್ ವರ್ಗಿಸ್ ಅವರಿಗೆ ಮೈಕೈಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಾರಮ್ಮಾ ಅವರಿಗೆ ಮೈಕೈ ನೋವುಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸುಂಕಸಾಳದ ಸಂತೋಷ ತಳೇಕರ ನೀಡಿದ ದೂರಿನ ಆಧಾರದ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.