ಚೌತಿ ಚಂದ್ರ ಎಂದರೆ ಕೇವಲ ಆಕಾಶದಲ್ಲಿ ಕಾಣುವ ಅರ್ಧಚಂದ್ರನಲ್ಲ. ಕಗ್ಗತ್ತಲಿನ ನಡುವೆ ಮೋಡಗಳು ಕವಿದಿರುವ ಆಕಾಶದಲ್ಲಿ ಕಾಣಿಸುವ ಆ ಚಂದ್ರನ ಹೊಳಪೇ ಒಂದು ವಿಶಿಷ್ಟ ಅನುಭವ. ಸುತ್ತಲೂ ಕಂದು ಬಣ್ಣದ ಮಬ್ಬು, ಅದರ ತುದಿಯಲ್ಲಿ ಚೂಪಾದ ಕತ್ತಿಯಂತೆ ಕಾಣಿಸುವ ಬಿಳಿ ಹಾಲಿನಂತಹ ಅರ್ಧಚಂದ್ರ… ಆ ಬೆಳಕಿನಲ್ಲಿ ಇಡೀ ಭೂಲೋಕವೇ ಹೊಳೆಯುತ್ತಿರುವಂತೆ ಭಾಸವಾಗುತ್ತದೆ.
ಚಂದ್ರನ ಕೆಳಗೆ ನಕ್ಷತ್ರದಂತೆ ಮಿನುಗುವ ಶುಕ್ರಗ್ರಹವೂ ಆ ದೃಶ್ಯದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕತ್ತಲಿನ ನಡುವೆ ಇಳಿದ ಸ್ವರ್ಗದ ತುಣುಕಿನಂತೆ ಆ ಕ್ಷಣ ಕಾಣಿಸುವುದರಲ್ಲಿ ಅಚ್ಚರಿಯೇನಿಲ್ಲ.
ಸಾಮಾನ್ಯವಾಗಿ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಚೌತಿ ಚಂದ್ರನಿಗೆ ಹಿಂದೂ ಧಾರ್ಮಿಕ ನಂಬಿಕೆಗಳಲ್ಲಿ ವಿಶೇಷ ಸ್ಥಾನವಿದೆ. ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡಬಾರದು ಎಂಬ ನಂಬಿಕೆಯೂ ಕೆಲವು ಸಂಪ್ರದಾಯಗಳಲ್ಲಿದೆ. ಇದರ ಹಿಂದೆ ಶ್ರೀಕೃಷ್ಣನಿಗೆ ಸಂಬಂಧಿಸಿದ ಸ್ಯಮಂತಕ ಮಣಿ ಕಥೆ ಹಾಗೂ ಗಣೇಶ ಮತ್ತು ಚಂದ್ರನಿಗೆ ಸಂಬಂಧಿಸಿದ ಪೌರಾಣಿಕ ಕಥೆಗಳು ಕಾರಣವೆಂದು ಹೇಳಲಾಗುತ್ತದೆ.
ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡಿದರೆ ಸುಳ್ಳು ಆರೋಪ ಅಥವಾ ಅಪವಾದ ಎದುರಾಗಬಹುದು ಎಂಬ ನಂಬಿಕೆ ಧಾರ್ಮಿಕ ಪರಂಪರೆಯಲ್ಲಿ ಕಂಡುಬರುತ್ತದೆ. ತಪ್ಪಾಗಿ ಚಂದ್ರನನ್ನು ನೋಡಿದರೆ ಗಣೇಶನನ್ನು ಪ್ರಾರ್ಥಿಸುವುದು, ಗಣೇಶನ ಕಥೆಯನ್ನು ಕೇಳುವುದು ಅಥವಾ ಓದುವುದು ಪರಿಹಾರವೆಂದು ಕೆಲವು ಸಂಪ್ರದಾಯಗಳು ಹೇಳುತ್ತವೆ.
ಆದರೆ ಇದು ಧಾರ್ಮಿಕ ನಂಬಿಕೆ ಮತ್ತು ಪೌರಾಣಿಕ ಪರಂಪರೆಗೆ ಸೇರಿದ ವಿಚಾರ. ವೈಜ್ಞಾನಿಕವಾಗಿ ಚೌತಿ ಚಂದ್ರನನ್ನು ನೋಡುವುದರಿಂದ ಅಪವಾದ ಅಥವಾ ಯಾವುದೇ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂಬುದಕ್ಕೆ ಸಾಕ್ಷ್ಯವಿಲ್ಲ. ಹೀಗಾಗಿ ಒಂದು ಕಡೆ ಚೌತಿ ಚಂದ್ರನ ಹೊಳಪು ಕಣ್ಣಿಗೆ ಹಬ್ಬವಾದರೆ, ಮತ್ತೊಂದೆಡೆ ಅದರ ಸುತ್ತಲಿನ ಪೌರಾಣಿಕ ಕಥೆಗಳು ನಮ್ಮ ಸಂಸ್ಕೃತಿಯ ಕುತೂಹಲವನ್ನು ಹೆಚ್ಚಿಸುತ್ತವೆ.
ಆಕಾಶದಲ್ಲಿ ಕ್ಷಣಕಾಲ ಕಾಣಿಸಿಕೊಂಡು ಮರೆಯಾಗುವ ಆ ಅರ್ಧಚಂದ್ರ… ಅದರ ಬೆಳಕನ್ನು ನೋಡುತ್ತಾ ನಿಂತಾಗ, ನಂಬಿಕೆ ಬೇರೆ, ವಿಜ್ಞಾನ ಬೇರೆ ಎಂಬುದಕ್ಕಿಂತಲೂ ನಮ್ಮ ಹಿಂದಿನವರು ಆಕಾಶದ ಪ್ರತಿಯೊಂದು ದೃಶ್ಯಕ್ಕೂ ಒಂದು ಕಥೆ ಕಟ್ಟಿಕೊಟ್ಟಿದ್ದರಲ್ಲ ಎಂಬುದೇ ಅಚ್ಚರಿ ಮೂಡಿಸುತ್ತದೆ!
– ದಶ್ಮಿತಾ ಕೆ. ಎಂ.
ಪತ್ರಿಕೋದ್ಯಮ ವಿದ್ಯಾರ್ಥಿನಿ.
