Saturday, June 13, 2026
HomeLocal Newsಉಳ್ಳವರಿಗೂ ಇಡುಗಂಟು, ಬಡ ರೈತನ ಬೆಳೆ ನಾಶಕ್ಕೆ ಪುಡಿಗಾಸು?!

ಉಳ್ಳವರಿಗೂ ಇಡುಗಂಟು, ಬಡ ರೈತನ ಬೆಳೆ ನಾಶಕ್ಕೆ ಪುಡಿಗಾಸು?!

ಯಲ್ಲಾಪುರದ ಅರಣ್ಯ ವಿಭಾಗದ ಸಸ್ಯೋದ್ಯಾನದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ-2026 ಕಾರ್ಯಕ್ರಮದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅವರು ಕಾಡುಪ್ರಾಣಿ ದಾಳಿಯಿಂದ ಗಾಯಗೊಂಡು ಅಂಗವೈಕಲ್ಯಕ್ಕೊಳಗಾದ ಸಂತ್ರಸ್ತರು ಹಾಗೂ ಕರ್ತವ್ಯ ನಿರ್ವಹಣೆಯ ವೇಳೆ ಮೃತಪಟ್ಟ ದಿನಗೂಲಿ ನೌಕರರ ಕುಟುಂಬಗಳಿಗೆ ಅರಣ್ಯ ಇಲಾಖೆಯಿಂದ ಮಂಜೂರಾದ ದಯಾತ್ಮಕ ಧನ ಮತ್ತು ಮಾಸಾಶನಕ್ಕೆ ಸಂಬಂಧಿಸಿದ ಅಧಿಕೃತ ಆದೇಶ ಪತ್ರಗಳನ್ನು ವಿತರಿಸಿದರು.

ಚಂದಗುಳಿ ಗ್ರಾಮದ ರಾಮಕೃಷ್ಣ ಸುಬ್ರಾಯ ಭಟ್ ಅವರಿಗೆ ಕರಡಿ ದಾಳಿಯಿಂದ ಅಂಗವೈಕಲ್ಯ ಉಂಟಾದ ಹಿನ್ನೆಲೆಯಲ್ಲಿ ₹10 ಲಕ್ಷ ದಯಾತ್ಮಕ ಧನ ಹಾಗೂ ಪ್ರತಿ ತಿಂಗಳು ₹4 ಸಾವಿರ ಮಾಸಾಶನ ಮಂಜೂರಾದ ಆದೇಶ ಪತ್ರ ವಿತರಿಸಲಾಯಿತು. ಕಿರವತ್ತಿ ವಲಯದ ಮಂಗ್ಯಾನ ತಾವರಗೇರಿಯ ಬಾಬು ಗಂಗು ಕೊಕ್ಕರೆ ಅವರಿಗೆ ಕಾಡುಹಂದಿ ದಾಳಿಯಿಂದ ಅಂಗವೈಕಲ್ಯ ಉಂಟಾದ ಕಾರಣ ₹10 ಲಕ್ಷ ಪರಿಹಾರ ಹಾಗೂ ₹4 ಸಾವಿರ ಮಾಸಾಶನದ ಆದೇಶ ನೀಡಲಾಯಿತು.

ಇದೇ ವೇಳೆ ಚಿಮಣಿಮಾಳದ ಗೋದಿ ಜಾನು ಜಂಗಳೆ, ಅಂದಲಗಿಯ ದ್ಯಾಮಣ್ಣ ನಾಗಪ್ಪ ಬೆಂಡಿಗೇರಿ ಹಾಗೂ ಚವಡಳ್ಳಿಯ ನಾಗುಬಾಯಿ ಜಾನು ವರಕ ಅವರಿಗೆ ಕರಡಿ ದಾಳಿಯಿಂದ ಉಂಟಾದ ಅಂಗವೈಕಲ್ಯದ ಹಿನ್ನೆಲೆಯಲ್ಲಿ ತಲಾ ₹5 ಲಕ್ಷ ದಯಾತ್ಮಕ ಧನ ಮಂಜೂರಾದ ಆದೇಶ ಪತ್ರ ವಿತರಿಸಲಾಯಿತು.

ಇಡಗುಂದಿ ವಲಯದ ವಜ್ರಳ್ಳಿಯ ಜೂಜೆ ಲೂಯಿಸ್ ಸಿದ್ದಿ ಅವರು ಬೆಂಕಿ ನಂದಿಸುವ ವೇಳೆ ಹೈವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ವಿಶೇಷ ಅನುಕಂಪದಡಿ ₹5 ಲಕ್ಷ ಪರಿಹಾರ ಧನ ಮಂಜೂರಾದ ಆದೇಶ ಪತ್ರವನ್ನು ಹಸ್ತಾಂತರಿಸಲಾಯಿತು.

ಈ ಎಲ್ಲ ಫಲಾನುಭವಿಗಳ ಸಾಲಿನಲ್ಲಿ ಇರುವ ಚಂದಗುಳಿ ಗ್ರಾಮದ ರಾಮಕೃಷ್ಣ ಸುಬ್ರಾಯ ಭಟ್ ಅವರಿಗೂ ಸರ್ಕಾರದಿಂದ ಈ ಮೊತ್ತದ ಪರಿಹಾರ ಸಿಕ್ಕಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸ ಒದಗಿಸಿದೆ. ಸ್ಥಳೀಯವಾಗಿ ಆರ್.ಎಸ್.‌ ಭಟ್‌ ಎಂದೇ ಗುರುತಿಸಿಕೊಂಡಿರುವ ಇವರು ರಾಜಕೀಯ ವಲಯದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಕ್ಷೇತ್ರದ ಶಾಸಕರ ಆಪ್ತರೂ ಹೌದು.

ಯಲ್ಲಾಪುರದ ಚಂದ್ಗುಳಿ ಉಪಳೇಶ್ವರ ಹುತ್ಕಂಡ ಭಾಗದಲ್ಲಿ 2024ರ ಡಿಸೆಂಬರ್ 21ರಂದು ಕರಡಿಗಳು ಆರ್.ಎಸ್. ಭಟ್ಟ ಅವರ ಮೇಲೆ ದಾಳಿ ನಡೆಸಿದ್ದವು. ಅವರು ಆ ಅವಧಿಯಲ್ಲಿ ಚಂದಗುಳಿ ಗ್ರಾಮ ಪಂಚಾಯತ ಸದಸ್ಯರಾಗಿದ್ದು, ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಹುದ್ದೆಯ ಸ್ಪರ್ಧೆಯಲ್ಲಿದ್ದರು.

ನಸುಕಿನ ಅವಧಿಯಲ್ಲಿ ಅವರ ಮೇಲೆ ಮೂರು ಕರಡಿ ದಾಳಿ ನಡೆಸಿದ್ದರಿಂದ ಕೈ-ಕಾಲು, ಮೈ-ಮುಖದ ಭಾಗಗಳಿಗೆ ಭಾರೀ ಪ್ರಮಾಣದಲ್ಲಿ ಗಾಯವಾಗಿತ್ತು. ನೆಲಕ್ಕೆ ಬಿದ್ದ ಅವರು ಸಾವರಿಸಿಕೊಂಡು ಮನೆ ಸೇರಿದ್ದು, ಕುಟುಂಬದವರು ಭಟ್ಟರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಹುಬ್ಬಳ್ಳಿಯಲ್ಲಿ ಚಿಕಿತ್ಸೆಪಡೆದ ನಂತರ ಅವರು ಗುಣಮುಖರಾಗಿದ್ದರು. ಆದರೆ, ಕರಡಿ ದಾಳಿಯ ಕುರುಹುಗಳು ಅವರಿಂದ ದೂರವಾಗಿರಲಿಲ್ಲ.

ಆರ್ ಎಸ್ ಭಟ್ಟ ಅವರ ಮೇಲೆ ಕರಡಿ ದಾಳಿ ನಡೆದ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿತು. ಅರಣ್ಯ ಅಧಿಕಾರಿಗಳು ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ, ಸೂಕ್ತ ಪರಿಹಾರಕ್ಕಾಗಿ ಮನವಿ ಮಾಡಿದ್ದರು. ಇದೀಗ ಪರಿಹಾರದ ಮೊತ್ತ ಆರ್.ಎಸ್. ಭಟ್ಟ ಅವರಿಗೆ ಸಿಕ್ಕಿದೆ. ಅದರೊಂದಿಗೆ ಪ್ರತಿ ತಿಂಗಳು ಅವರಿಗೆ 4 ಸಾವಿರ ರೂ ಮಾಸಾಶನ ದೊರೆಯಲಿದೆ. 

ಅದೆಲ್ಲವೂ ಸರಿ. ಆದರೆ, ಎಲ್ಲೋ ತುಂಡು ಭೂಮಿ ಹೊಂದಿರುವ ರೈತರು ತೋಟದಲ್ಲಿ ಕಾಡು ಹಂದಿಗಳು ದಾಳಿ ಮಾಡಿ ಇಡೀ ತೋಟವನ್ನು ನಾಶಪಡಿಸಿದರೂ, ಜೀವನಕ್ಕೆ ಆಧಾರವಾಗಿ ನಿಲ್ಲಬೇಕಿದ್ದ ಭತ್ತದ ಗದ್ದೆಗಳು ಇದೇ ಕಾಡು ಪ್ರಾಣಿಗಳಿಂದ ನೆಲಸಮವಾಗಿದ್ದರೂ ಬಡ ರೈತರು ಸಲ್ಲಿಸುವ ದೂರುಗಳ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ಇಲಾಖೆ, ಹುಲಿ, ಚಿರತೆ ಇತ್ಯಾದಿ ಪ್ರಾಣಿಗಳು ಕೊಟ್ಟಿಗೆಗೇ ನುಗ್ಗಿ ಹಸುಗಳನ್ನು ಎಳೆದೊಯ್ದರೂ ಹತ್ತಾರು ದಾಖಲೆ ಕೇಳಿ, ನೂರಾರು ಓಡಾಟ ಮಾಡಿಸಿ ಚಪ್ಪಲಿ ಸವೆಸುವಂತೆ ಮಾಡುವ ಇಲಾಖೆ ಕೊನೆಗೆ ಕೈಗಿಡುವುದು ಪುಡಿಗಾಸು ಮಾತ್ರ. ಆದರೆ ಉಳ್ಳವರಿಗೆ ಮಾತ್ರ ಇಡಿಗಂಟೇ ಎಂಬ ಚರ್ಚೆ ತಾಲೂಕಿನಾದ್ಯಂತ ಜೋರಾಗಿ ನಡೆಯುತ್ತಿದೆ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share