‘ಡಾ. ಸಾಂಟೋ ನಿಕ್ಕೊ’ ಕಥೆಗೆ ₹1.54 ಕೋಟಿ ಕಳೆದ ಕಾರವಾರದ ಮಹಿಳೆ
ಕಾರವಾರ: ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಒಪ್ಪಿಕೊಳ್ಳುವುದಕ್ಕೆ ಎರಡು ಸೆಕೆಂಡ್ ಸಾಕು. ಆದರೆ, ಆ ಎರಡು ಸೆಕೆಂಡ್ನ ನಿರ್ಧಾರ ಕೆಲವೊಮ್ಮೆ ಜೀವನಪೂರ್ತಿ ಮರೆತಿರಲಾರದ ಪಾಠ ಕಲಿಸಿಬಿಡುತ್ತದೆ. ಕಾರವಾರದ ನಿವೃತ್ತ ಮಹಿಳೆಯೊಬ್ಬರು ಇದೇ ರೀತಿಯ ಆನ್ಲೈನ್ ಸ್ನೇಹದ ಬಲೆಗೆ ಬಿದ್ದು ಬರೋಬ್ಬರಿ ₹1.54 ಕೋಟಿ ಕಳೆದುಕೊಂಡಿರುವ ಪ್ರಕರಣ ಸೈಬರ್ ವಂಚಕರ ಕುತಂತ್ರ ಎಷ್ಟರ ಮಟ್ಟಿಗೆ ತಲುಪಿದೆ ಎಂಬುದನ್ನು ಮತ್ತೊಮ್ಮೆ ತೋರಿಸಿದೆ.
ತನ್ನನ್ನು ಇಟಲಿ ಮೂಲದವನು, ಜರ್ಮನಿಯಲ್ಲಿ ಪ್ಲಾಸ್ಟಿಕ್ ಸರ್ಜನ್ ಆಗಿ ಕೆಲಸ ಮಾಡುವ ವೈದ್ಯ ಎಂದು ಪರಿಚಯಿಸಿಕೊಂಡ ಆತ, ಕೆಲವೇ ದಿನಗಳಲ್ಲಿ ಆತ್ಮೀಯನಾಗಿಬಿಟ್ಟ. ಮಾತು ಮಾತಿನಲ್ಲಿ ಮಲೇಶಿಯಾದಲ್ಲಿ ದೊಡ್ಡ ಸಂಬಳದ ಕೆಲಸ ಸಿಕ್ಕಿದೆ ಎಂದ. ನಂತರ ಅಮ್ಮ ಬಿದ್ದಿದ್ದಾರೆ, ಚಿಕಿತ್ಸೆಗಾಗಿ ಹಣ ಬೇಕು ಎಂದ. ಶೈಲಾ ನಾಯಕ ಅವರು ಮಾನವೀಯತೆಯಿಂದ ₹2 ಲಕ್ಷ ಕಳುಹಿಸಿದರು.
ಕಾರವಾರದ ಕಾಯ್ಕಿಣಿ ರಸ್ತೆಯ ರಾಯ್ಕರ್ ಮೆನರ್ ನಿವಾಸಿ, 63 ವರ್ಷದ ಶೈಲಾ ನಾರಾಯಣ ನಾಯಕ ಅವರು 2025ರ ಡಿಸೆಂಬರ್ನಲ್ಲಿ ಫೇಸ್ಬುಕ್ ಬಳಸುತ್ತಿದ್ದಾಗ “ಡಾ. ಸಾಂಟೋ ನಿಕ್ಕೊ” ಎಂಬ ಹೆಸರಿನ ವ್ಯಕ್ತಿಯಿಂದ ಸ್ನೇಹದ ಕೋರಿಕೆ ಬಂದಿದೆ. “ಫ್ರೆಂಡ್ ರಿಕ್ವೆಸ್ಟ್” ಒಪ್ಪಿಕೊಂಡಿದ್ದು, ಬಳಿಕ ಮೆಸೆಂಜರ್, ನಂತರ ವಾಟ್ಸ್ಆ್ಯಪ್… ಅಲ್ಲಿಂದ ಶುರುವಾಯಿತು ನಂಬಿಕೆಯ ಕಥೆ.
ಅಲ್ಲಿಂದ ಕಥೆಗೆ ಬ್ರೇಕ್ ಇರಲಿಲ್ಲ. ಒಂದು ದಿನ ಕಾರು ಅಪಘಾತವಾಗಿ ಕೈ ಕತ್ತರಿಸುವ ಪರಿಸ್ಥಿತಿ ಬಂದಿದೆ ಎಂದು ಹೇಳಿದ. ಕೈ ಉಳಿಸಿಕೊಳ್ಳಲು ₹31 ಲಕ್ಷ ಬೇಕಂತೆ! ನಂತರ “ನಾನು ಭಾರತಕ್ಕೆ ₹1 ಕೋಟಿಗೂ ಹೆಚ್ಚು ಹಣ ತಂದಿದ್ದೇನೆ. ಆದರೆ ದೆಹಲಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಹಿಡಿದಿದೆ. ಬಿಡಿಸಿಕೊಳ್ಳಲು ₹35 ಲಕ್ಷ ಬೇಕು” ಎಂದ. ಅದಾದ ಮೇಲೆ ಟ್ಯಾಕ್ಸ್, ದಂಡ, ಅಧಿಕಾರಿ, ಲಂಚ, ಸಿಸಿಟಿವಿ… ಹೀಗೆ ಪ್ರತೀ ಬಾರಿ ಹೊಸ ಕಥೆ, ಹೊಸ ಪಾತ್ರ, ಹೊಸ ಕಾರಣ!
ಚಿತ್ರದ ಕಥೆಗಾರನೂ ಇಷ್ಟು ಟ್ವಿಸ್ಟ್ ಕೊಡಲಾರನೋ ಅನ್ನಿಸುವಷ್ಟು ತಿರುವುಗಳನ್ನು ಹೇಳಿದರೂ, “ಇದಾದ್ಮೇಲೆ ಖಂಡಿತ ಹಣ ಬರುತ್ತದೆ” ಎಂಬ ನಂಬಿಕೆಯಲ್ಲಿ ಶೈಲಾ ನಾಯಕ ಅವರು ಒಂದರ ಹಿಂದೆ ಒಂದರಂತೆ ಹಣದ ಕಂತೆ ವರ್ಗಾಯಿಸುತ್ತಲೇ ಹೋದರು. ಕೊನೆಗೆ ಲೆಕ್ಕ ಹಾಕಿದಾಗ ಅವರ ಖಾತೆಯಿಂದ ಕರಗಿದ ಮೊತ್ತ ₹1,54,14,161!
ಆದರೆ “ಡಾ. ಸಾಂಟೋ ನಿಕ್ಕೊ” ಮಾತ್ರ ಭಾರತಕ್ಕೂ ಬರಲಿಲ್ಲ… ಹಣವನ್ನೂ ಮರಳಿಸಲಿಲ್ಲ… ಕೊನೆಗೆ ಫೋನ್, ಚಾಟ್, ಸಂಪರ್ಕ ಎಲ್ಲವೂ ಮೌನವಾಗಿಬಿಟ್ಟವು. ಆಗಷ್ಟೇ ಇದು ಸ್ನೇಹವಲ್ಲ, ಸೈಬರ್ ವಂಚನೆಯ ಬಲೆ ಎಂಬುದು ಅವರಿಗೆ ಅರಿವಾಯಿತು. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ಆರೋಪಿಯ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.
ಈ ಘಟನೆ ಓದಿದಾಗ “ಒಬ್ಬ ಮನುಷ್ಯ ಇಷ್ಟು ಕಾರಣ ಹೇಳ್ತಾನಾ?” ಎನ್ನಿಸಬಹುದು. ಆದರೆ ಇದೇ ವಂಚಕರು ಪ್ರತಿದಿನ ಸಾವಿರಾರು ಜನರನ್ನು ಭಾವನೆ, ಕರುಣೆ, ಪ್ರೀತಿ ಮತ್ತು ನಂಬಿಕೆಯ ಹೆಸರಿನಲ್ಲಿ ಮೋಸ ಮಾಡುತ್ತಿದ್ದಾರೆ. ಅವರ ದೊಡ್ಡ ಆಯುಧ ತಂತ್ರಜ್ಞಾನವಲ್ಲ… ನಮ್ಮ ವಿಶ್ವಾಸ!
ಫೇಸ್ಬುಕ್, ಇನ್ಸ್ಟಾಗ್ರಾಂ ಅಥವಾ ವಾಟ್ಸ್ಆ್ಯಪ್ನಲ್ಲಿ ಪರಿಚಯವಾದ ಯಾರೇ ಆಗಿರಲಿ, ಅವರು ವಿದೇಶದಲ್ಲಿದ್ದಾರೆ, ವೈದ್ಯರು, ಸೈನಿಕರು, ಎಂಜಿನಿಯರ್ಗಳು ಅಥವಾ ದೊಡ್ಡ ಉದ್ಯಮಿಗಳು ಎಂದು ಹೇಳಿದರೂ ಹಣ ಕೇಳಿದ ಕ್ಷಣವೇ ಎಚ್ಚೆತ್ತುಕೊಳ್ಳಿ. ಆನ್ಲೈನ್ ಸ್ನೇಹಕ್ಕೆ “ಲೈಕ್” ಕೊಡಿ… ಆದರೆ ಬ್ಯಾಂಕ್ ಖಾತೆಗೆ “ಆಕ್ಸೆಸ್” ಕೊಡಬೇಡಿ. ಕೆಲವೊಮ್ಮೆ “Delete Chat” ಮಾಡಿದರೆ ಸಾಕು… “Delete Savings” ಆಗುವುದನ್ನು ತಪ್ಪಿಸಬಹುದು!