ಇಂದಿನ ವೇಗದ ಬದುಕಿನಲ್ಲಿ ʻಒಟ್ಟಿಗೆ ವಾಸಿಸುವುದೇ ಮದುವೆʼ ಎಂಬ ಪರಂಪರಾಗತ ಕಲ್ಪನೆಗೆ ಸವಾಲು ಎಸೆದು ನಿಧಾನವಾಗಿ ಪ್ರಸಿದ್ಧಿ ಪಡೆಯುತ್ತಿರುವದು ಡಿಸ್ಟನ್ಸ್ ಮ್ಯಾರೇಜ್. ಅಂದರೆ ದಂಪತಿಗಳು ಕಾನೂನುಬದ್ಧವಾಗಿ ವಿವಾಹವಾಗಿದ್ದರೂ, ಉದ್ಯೋಗ, ಶಿಕ್ಷಣ, ವಿದೇಶಿ ನಿಯೋಜನೆ, ವ್ಯವಹಾರ ಅಥವಾ ವೈಯಕ್ತಿಕ ಗುರಿಗಳ ಕಾರಣದಿಂದ ಬೇರೆ ಬೇರೆ ನಗರಗಳಲ್ಲಿ ಅಥವಾ ದೇಶಗಳಲ್ಲಿ ವಾಸಿಸುವ ವ್ಯವಸ್ಥೆ.
ಜಾಗತೀಕರಣ, ಐಟಿ ಉದ್ಯೋಗಗಳು, ವಿದೇಶಿ ಅವಕಾಶಗಳು, ವರ್ಕ್ ಫ್ರಮ್ ಹೋಮ್ ಮಾದರಿಗಳು ಇವೆಲ್ಲವೂ ಈ ರೀತಿಯ ಮದುವೆಗೆ ಪೂರಕವಾಗಿವೆ. ವಿಶೇಷವಾಗಿ ಐಟಿ ಮತ್ತು ಕಾರ್ಪೊರೇಟ್ ಕ್ಷೇತ್ರಗಳಲ್ಲಿ ಉದ್ಯೋಗಿಗಳ ಸಂಖ್ಯೆ ಹೆಚ್ಚಿರುವ ಬೆಂಗಳೂರು, ಹೈದರಾಬಾದ್, ಪುಣೆ ಮುಂತಾದ ನಗರಗಳಲ್ಲಿ ಈ ಮಾದರಿ ಹೆಚ್ಚು ಗೋಚರಿಸುತ್ತಿದೆ.
ಡಿಸ್ಟನ್ಸ್ ಮ್ಯಾರೇಜ್ ಎನ್ನುವುದು ಸಂಪೂರ್ಣ ಹೊಸ ಸಂಪ್ರದಾಯವಲ್ಲ. ಆದರೆ ಹಿಂದಿನ ಪೀಳಿಗೆಯಲ್ಲಿ ಇದು ಅಪರೂಪವಾಗಿದ್ದರೆ, ಈಗ ಅದು ಸಾಮಾಜಿಕವಾಗಿ ಹೆಚ್ಚು ಸ್ವೀಕೃತವಾಗುತ್ತಿದೆ. ವಿಶೇಷವಾಗಿ ಇಬ್ಬರೂ ಉದ್ಯೋಗದಲ್ಲಿರುವ ದಂಪತಿಗಳಲ್ಲಿ, ಕರಿಯರ್ ಮೊದಲು ಎಂಬ ದೃಷ್ಟಿಕೋನದಿಂದ ತಾತ್ಕಾಲಿಕವಾಗಿ ದೂರವಿದ್ದು ಜೀವನ ನಡೆಸುವ ನಿರ್ಧಾರಗಳು ಹೆಚ್ಚಾಗಿವೆ. ವಿದೇಶದಲ್ಲಿ ಕೆಲಸ ಮಾಡುವ ಪತಿ ಅಥವಾ ಪತ್ನಿ, ದೇಶದಲ್ಲಿರುವ ಸಂಗಾತಿ-ಈಗ ಸಾಮಾನ್ಯ ದೃಶ್ಯ.
ಆದರೆ ಇದಕ್ಕೆ ಸವಾಲುಗಳೂ ಕಡಿಮೆ ಇಲ್ಲ. ದೈನಂದಿನ ಜೀವನದ ಸಣ್ಣ ಕ್ಷಣಗಳನ್ನು ಹಂಚಿಕೊಳ್ಳಲು ಸಾಧ್ಯವಾಗದಿರುವುದು, ಒಂಟಿತನ, ಭಾವನಾತ್ಮಕ ಅಂತರ, ಕುಟುಂಬದ ಒತ್ತಡ ಇವು ಸಂಬಂಧದಲ್ಲಿ ಬಿರುಕು ಮೂಡಿಸಬಹುದು. ವಿಶೇಷವಾಗಿ ಮಕ್ಕಳಿರುವ ಕುಟುಂಬಗಳಲ್ಲಿ ಈ ಮಾದರಿ ಹೆಚ್ಚು ಸಂಕೀರ್ಣ. ಪೋಷಕರಲ್ಲಿ ಒಬ್ಬರ ಗೈರುಹಾಜರಾತಿ ಮಕ್ಕಳ ಮನೋವಿಕಾಸದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಸಮಯ ವ್ಯತ್ಯಾಸ (ಟೈಮ್ ಝೋನ್) ಇರುವ ವಿದೇಶಿ ಉದ್ಯೋಗಗಳಲ್ಲಿ ಸಂವಹನದ ಅಡಚಣೆಗಳೂ ಕಾಣಿಸಬಹುದು.
ಸಾಮಾಜಿಕ ದೃಷ್ಟಿಯಿಂದ ನೋಡಿದರೆ, ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬ ಒಟ್ಟುಗೂಡುವ ಕಲ್ಪನೆ ಬಲವಾಗಿದೆ. ಹೀಗಾಗಿ ಹಿರಿಯರು, ಬಂಧುಬಳಗ ಕೆಲವೊಮ್ಮೆ ಡಿಸ್ಟನ್ಸ್ ಮ್ಯಾರೇಜ್ ಅನ್ನು ಅಸ್ವೀಕರಿಸುವ ಸಾಧ್ಯತೆ ಇದೆ. “ಒಟ್ಟಿಗೆ ಇರದಿದ್ದರೆ ಸಂಬಂಧ ಹೇಗೆ ಬಲವಾಗುತ್ತದೆ?” ಎಂಬ ಪ್ರಶ್ನೆ ಸಹಜ. ಆದರೆ ಮತ್ತೊಂದೆಡೆ, ಹೊಸ ಪೀಳಿಗೆ ಸಂಬಂಧವನ್ನು ಕೇವಲ ಭೌತಿಕ ಸಮೀಪತೆಗೆ ಮಾತ್ರ ಸೀಮಿತಗೊಳಿಸುವುದಿಲ್ಲ, ಪರಸ್ಪರ ಗೌರವ, ವಿಶ್ವಾಸ ಮತ್ತು ಸ್ಪಷ್ಟ ಸಂವಹನವೇ ಮುಖ್ಯವೆಂದು ಒತ್ತಿ ಹೇಳುತ್ತದೆ.
ವಿಮರ್ಶಾತ್ಮಕವಾಗಿ ನೋಡಿದರೆ, ಡಿಸ್ಟನ್ಸ್ ಮ್ಯಾರೇಜ್ ಸಂಪೂರ್ಣ ಉತ್ತಮವೂ ಅಲ್ಲ, ಸಂಪೂರ್ಣ ಕೆಟ್ಟ ಮಾದರಿಯೂ ಅಲ್ಲ. ಇದು ದಂಪತಿಗಳ ಮನೋಸ್ಥಿತಿ, ಗುರಿಗಳು, ಪರಸ್ಪರ ನಂಬಿಕೆ ಮತ್ತು ಪರಿಸ್ಥಿತಿಗಳ ಮೇಲೆ ಅವಲಂಬಿತ. ನಿರಂತರ ಸಂವಹನ, ನಿಯಮಿತ ಭೇಟಿಗಳು, ಸ್ಪಷ್ಟ ಯೋಜನೆ ಮತ್ತು ಭವಿಷ್ಯದ ದೃಷ್ಟಿಕೋನ ಇದ್ದರೆ ಇದು ಯಶಸ್ವಿಯಾಗಬಹುದು. ಆದರೆ ಸಂವಹನದ ಕೊರತೆ, ಅನುಮಾನ ಮತ್ತು ಭಾವನಾತ್ಮಕ ದೂರ ಹೆಚ್ಚಾದರೆ ಸಂಬಂಧದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಒಟ್ಟಿನಲ್ಲಿ, ಡಿಸ್ಟನ್ಸ್ ಮ್ಯಾರೇಜ್ ಆಧುನಿಕ ಜೀವನಶೈಲಿಯ ಪ್ರತಿಫಲ. ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಸಾಧಿಸಲು ಕೆಲವು ದಂಪತಿಗಳು ಆರಿಸಿಕೊಂಡ ಮಾರ್ಗ. ಆದರೆ ಇದು ಶಾಶ್ವತ ಪರಿಹಾರವಲ್ಲ!