ಯಲ್ಲಾಪುರ: ಬೆಟ್ಟದ ಹಕ್ಕಿಗಾಗಿ ರೈತರು ಅರಣ್ಯ ಇಲಾಖೆಯ ಮುಂದೆ ಭಿಕ್ಷೆ ಬೇಡುವ ಸ್ಥಿತಿ ಬರಬಾರದು. ತಮ್ಮ ಹಕ್ಕುಗಳ ರಕ್ಷಣೆಗಾಗಿ ಜಿಲ್ಲೆಯ ಎಲ್ಲ ರೈತರು ಸಂಘಟಿತರಾಗಿ ಮುನ್ನಡೆಯಬೇಕು ಎಂದು ಸಾಮಾಜಿಕ ಪ್ರಮುಖ ಹರಿಪ್ರಕಾಶ ಕೋಣೆಮನೆ ಹೇಳಿದರು.
ಯಲ್ಲಾಪುರದ ಟಿಎಂಎಸ್ ಸಭಾಭವನದಲ್ಲಿ ನಡೆದ ಬೆಟ್ಟ ಬಳಕೆದಾರರ ಹಿತರಕ್ಷಣೆ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಟ್ಟವನ್ನು ಸಂರಕ್ಷಿಸಿಕೊಂಡು ಪಾರಂಪರಿಕವಾಗಿ ಬಳಸಿಕೊಂಡು ಬರುತ್ತಿರುವ ಸಣ್ಣ ರೈತರ ಮೇಲೆ ದೌರ್ಜನ್ಯ ನಡೆಯಬಾರದು ಎಂದು ಹೇಳಿದರು.
ಅರಣ್ಯ ಕಳ್ಳರ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳಲಿ. ಆದರೆ ತಲೆತಲಾಂತರಗಳಿಂದ ಬೆಟ್ಟವನ್ನು ಕೃಷಿ ಹಾಗೂ ಜೀವನೋಪಾಯಕ್ಕಾಗಿ ಬಳಸಿಕೊಂಡು ಬರುತ್ತಿರುವ ರೈತರಿಗೆ ತೊಂದರೆ ನೀಡುವುದು ಸರಿಯಲ್ಲ.
ಬೆಟ್ಟ ಬಳಕೆದಾರರ ಸಮಸ್ಯೆ ಯಲ್ಲಾಪುರ ಅಥವಾ ಒಂದು ತಾಲೂಕಿನ ಸಮಸ್ಯೆಯಾಗಿ ಉಳಿಯದೆ, ಜಿಲ್ಲೆಯಾದ್ಯಂತ ಇರುವ ರೈತರ ಸಮಸ್ಯೆಯಾಗಿದೆ. ಹೀಗಾಗಿ ರೈತರ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಮಟ್ಟದಲ್ಲಿ ವ್ಯವಸ್ಥಿತ ಸಂಘಟನೆಯನ್ನು ರೂಪಿಸಿ ಮುಂದಿನ ಹೋರಾಟವನ್ನು ಸಂಘಟಿತವಾಗಿ ನಡೆಸುವ ಅಗತ್ಯವಿದೆ ಎಂದು ಹರಿಪ್ರಕಾಶ ಕೋಣೆಮನೆ ಪ್ರತಿಪಾದಿಸಿದರು.
ಟಿಆರ್ಸಿ ಶಿರಸಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಮಾತನಾಡಿ, ಬೆಟ್ಟ ಬಳಕೆದಾರರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಜಾಗೃತರಾಗಿ ಸಂಘಟಿತರಾಗಬೇಕು. ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ಪಕ್ಷಾತೀತವಾಗಿ ಅಧಿಕಾರಿಗಳೊಂದಿಗೆ ಸಂವಹನ ನಡೆಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ನಡೆಯಬೇಕು ಎಂದರು.
ಖ್ಯಾತ ನ್ಯಾಯವಾದಿ ರವಿ ಹೆಗಡೆ ಹೂವಿನಮನೆ, ಸೊಪ್ಪಿನ ಬೆಟ್ಟದ ಸಮರ್ಪಕ ನಿರ್ವಹಣೆಯ ಜತೆಗೆ ರೈತರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಜಿಲ್ಲಾಮಟ್ಟದ ಸಮಿತಿ ರಚಿಸಿ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ನಡೆಸುವ ಅಗತ್ಯವಿದೆ ಎಂದು ಹೇಳಿದರು.
ಶಿರಸಿಯ ಬೆಟ್ಟ ಜಾಗೃತಿ ಅಭಿಯಾನದ ಸಂಚಾಲಕ ಎಸ್.ಕೆ. ಭಾಗ್ವತ್, ಅಡಕೆ ಭಾಗಾಯ್ತಕ್ಕೆ ಬೆಟ್ಟ ಬಳುವಳಿಯಾಗಿ ಬಂದಿರುವ ಪ್ರದೇಶಗಳು ಹಾಗೂ ತರಿ ಅಮೀನು ಬಳಕೆಗೆ ಹೊಂದಿಕೊಂಡಿರುವ ಸ್ಟ್ರಿಪ್ ಭೂಮಿಯ ಕುರಿತು ಮಾಹಿತಿ ನೀಡಿ, ಪ್ರದೇಶದಿಂದ ಪ್ರದೇಶಕ್ಕೆ ಹೆಸರು ಬದಲಾಗಿದ್ದರೂ ಬಳಕೆಯ ಉದ್ದೇಶ ಒಂದೇ ಆಗಿದ್ದು, ಇಂದಿನ ಸಮಸ್ಯೆಗಳಿಗೆ ಸಂಘಟನೆಯೇ ಪ್ರಮುಖ ಪರಿಹಾರ ಎಂದರು.
ವಕೀಲ ಆರ್.ಕೆ. ಭಟ್, ಸೊಪ್ಪಿನ ಬೆಟ್ಟದಲ್ಲಿ ರೈತರು ದರಕು, ಸೊಪ್ಪು, ಕಲ್ಲು, ಮಣ್ಣು ಸೇರಿದಂತೆ ಅಗತ್ಯ ವಸ್ತುಗಳನ್ನು ಬಳಸಿಕೊಳ್ಳುವ ವಿಚಾರವನ್ನು ಪ್ರಸ್ತಾಪಿಸಿ, ಬೆಟ್ಟ ಭೂಮಿಯ ಹಕ್ಕು ಮತ್ತು ಅದರ ಆಡಳಿತಾತ್ಮಕ ವ್ಯಾಪ್ತಿಯ ಕುರಿತು ರೈತರು ಸ್ಪಷ್ಟತೆ ಪಡೆದುಕೊಳ್ಳಬೇಕು. ಬೆಟ್ಟದ ವಿಚಾರ ಕೇವಲ ಸವಲತ್ತಿನ ಬೇಡಿಕೆಯಾಗದೆ ಹಕ್ಕೊತ್ತಾಯವಾಗಿ ರೂಪುಗೊಳ್ಳಬೇಕು ಎಂದರು.
ರಾಘವೇಂದ್ರ ಭಟ್ ಹಾಸಣಗಿ ಮಾತನಾಡಿ, ವಿಚಾರ ಸಂಕಿರಣವು ಬೆಟ್ಟ ಬಳಕೆದಾರ ರೈತರ ಹಿತಕಾಪಾಡುವ ನಿಟ್ಟಿನಲ್ಲಿ ಮಹತ್ವದ ಘಟ್ಟವಾಗಿದ್ದು, ಮುಂದಿನ ದಿನಗಳಲ್ಲಿ ಸಂಘಟಿತ ಹೋರಾಟಕ್ಕೆ ನಾಂದಿಯಾಗಬಹುದು ಎಂದರು.
ಟಿಎಂಎಸ್ ಯಲ್ಲಾಪುರ ಅಧ್ಯಕ್ಷ ನಾರಾಯಣ ಭಟ್ ಅಗ್ಗಾಶಿಕುಂಬ್ರಿ, ರೈತರ ಹಕ್ಕುಗಳ ಜತೆಗೆ ಪಾರಂಪರಿಕ ಕೃಷಿ ವಾರಸುದಾರಿಕೆಯನ್ನೂ ಉಳಿಸಿಕೊಂಡು ಹೋಗುವ ಅಗತ್ಯವನ್ನು ಒತ್ತಿ ಹೇಳಿದರು.
ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಜೋಯಿಡಾ ತಾಲೂಕುಗಳ ಬೆಟ್ಟ ಬಳಕೆದಾರ ರೈತರು ಮತ್ತು ಅಡಕೆ ಬೆಳೆಗಾರರು ಸಭೆಯಲ್ಲಿ ಭಾಗವಹಿಸಿದ್ದರು. ನಾಲ್ಕೂ ತಾಲೂಕುಗಳ ರೈತರು ಎದುರಿಸುತ್ತಿರುವ ಸಮಸ್ಯೆಗಳ ಸ್ವರೂಪ ಬಹುತೇಕ ಒಂದೇ ಆಗಿರುವುದರಿಂದ, ಪರಿಹಾರಕ್ಕಾಗಿ ಒಗ್ಗಟ್ಟಿನ ಪ್ರಯತ್ನ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಬೆಟ್ಟ ಬಳಕೆದಾರರ ಹಿತರಕ್ಷಣೆ ಸಮಿತಿ ಸಂಚಾಲಕ ಕೆ.ಟಿ. ಹೆಗಡೆ ಸ್ವಾಗತಿಸಿದರು. ದೀಪಕ ಭಟ್ ಮಲವಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಮಹೇಶ್ ದೇಸಾಯಿ ವಂದಿಸಿದರು.