Friday, September 18, 2026
Join WhatsApp Group
HomeStateಹಾನಗಲ್ ಕೋರ್ಟ್ ಆವರಣದಲ್ಲಿ ಮಿಡಿನಾಗ!

ಹಾನಗಲ್ ಕೋರ್ಟ್ ಆವರಣದಲ್ಲಿ ಮಿಡಿನಾಗ!

ಹಾನಗಲ್: ಕೋರ್ಟ್ ಕ್ಯಾಂಪಸ್‌ನಲ್ಲಿರುವ ಜೆರಾಕ್ಸ್ ಮತ್ತು ಡಿಟಿಪಿ ಸೆಂಟರ್‌ಗೆ ವಿಷಪೂರಿತ ಮಿಡಿನಾಗರ ಹಾವು ನುಗ್ಗಿದ್ದರಿಂದ ಕಚೇರಿ ಸಿಬ್ಬಂದಿ ಆತಂಕಗೊಂಡ ಘಟನೆ ಶುಕ್ರವಾರ ರಾತ್ರಿ ಹಾನಗಲ್‌ನಲ್ಲಿ ನಡೆದಿದೆ. ಆದರೆ ಮಾಹಿತಿ ತಿಳಿದ ಕೆಲವೇ ಹೊತ್ತಿನಲ್ಲಿ ಸ್ಥಳಕ್ಕೆ ಧಾವಿಸಿದ ಉರಗ ರಕ್ಷಕ ಹಾಗೂ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಅವರು ಹಾವನ್ನು ಸುರಕ್ಷಿತವಾಗಿ ಹಿಡಿದು, ಅರಣ್ಯ ಪ್ರದೇಶಕ್ಕೆ ಬಿಡುವ ಮೂಲಕ ಆತಂಕ ನಿವಾರಿಸಿದರು.

ಸೆ.11ರಂದು ರಾತ್ರಿ ಸುಮಾರು 7.30ರ ವೇಳೆಗೆ ಹಾನಗಲ್ ಕೋರ್ಟ್ ಕ್ಯಾಂಪಸ್‌ನಲ್ಲಿರುವ ಚನ್ನಪ್ಪ ಛಲವಾದಿ ಅವರ ಜೆರಾಕ್ಸ್ ಮತ್ತು ಡಿಡಿಪಿ ಸೆಂಟರ್ ಒಳಗೆ ಮಿಡಿನಾಗರ ಹಾವು ಕಾಣಿಸಿಕೊಂಡಿತ್ತು. ಇದರಿಂದ ಕಚೇರಿಯವರು ಆತಂಕಗೊಂಡಿದ್ದು, ವಕೀಲ ಪ್ರಶಾಂತ್ ಕತ್ಲರ್ ಅವರು ದೂರವಾಣಿ ಮೂಲಕ ಚನ್ನಪ್ಪ ಛಲವಾದಿ ಅವರಿಗೆ ಮಾಹಿತಿ ನೀಡಿದರು.

ತಕ್ಷಣವೇ ಚನ್ನಪ್ಪ ಛಲವಾದಿ ಅವರು ಉರಗ ರಕ್ಷಣೆಯಲ್ಲಿ ಹೆಸರುವಾಸಿಯಾಗಿರುವ ಪಾಳ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಮಾಹಿತಿ ಸಿಕ್ಕ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಸುನೀಲ್ ಹೊನ್ನಾವರ ಅವರು ಯಾವುದೇ ಅಪಾಯವಾಗದಂತೆ ಮಿಡಿನಾಗರ ಹಾವನ್ನು ಸುರಕ್ಷಿತವಾಗಿ ಹಿಡಿದರು.

ನಂತರ ಕೋರ್ಟ್ ಆವರಣದಲ್ಲಿ ನೆರೆದಿದ್ದ ವಕೀಲರು ಹಾಗೂ ಸಾರ್ವಜನಿಕರಿಗೆ ಹಾವಿನ ಕುರಿತು ಮಾಹಿತಿ ನೀಡಿ, ವಿಷಪೂರಿತ ಹಾವುಗಳನ್ನು ಕಂಡಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಜಾಗೃತಿ ಮೂಡಿಸಿದರು. ಬಳಿಕ ರಕ್ಷಿಸಿದ ಹಾವನ್ನು ಅದರ ನೈಸರ್ಗಿಕ ಆವಾಸಸ್ಥಾನಕ್ಕೆ ಸಮೀಪದ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡಲಾಯಿತು.

ತಮ್ಮ ಇಲಾಖೆಯ ಕರ್ತವ್ಯದ ಒತ್ತಡದ ನಡುವೆಯೂ ಕರೆ ಬಂದ ತಕ್ಷಣ ದೂರದ ಸ್ಥಳಗಳಿಗೂ ತೆರಳಿ ಉರಗಗಳನ್ನು ರಕ್ಷಿಸುವ ಸುನೀಲ್ ಹೊನ್ನಾವರ ಅವರ ಕಾರ್ಯಕ್ಕೆ ಹಾನಗಲ್ ವಕೀಲರ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಇದೇ ರೀತಿಯ ಸೇವೆಯನ್ನು ಮುಂದುವರಿಸುವಂತೆ ಹಾರೈಸಲಾಯಿತು.

ಕಾರ್ಯಾಚರಣೆಯಲ್ಲಿ ಅರಣ್ಯ ವೀಕ್ಷಕರಾದ ಜಗದೀಶ್ ಗೌಡ್ರು ಹಾಗೂ ಮಹಮದ್ ಖಾನ್ ನಾಗರವಳ್ಳಿ, ಹಾನಗಲ್ ವಕೀಲರ ಸಂಘದ ಕಾರ್ಯದರ್ಶಿ ಸತೀಶ್ ತಿಳುವಳ್ಳಿ, ನಾಗಪ್ಪ ಹಲಗಣ್ಣನವರ್, ನೋಟರಿ ಮಾಂತೇಶ ತೊಗರಳ್ಳಿ, ವಕೀಲರಾದ ಎಸ್. ವಾಯ್ಯ ಗೌಂಡಿ, ಜಿ.ಆರ್. ಛಲವಾದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad

Most Popular

error: Content is protected !!
Share