Friday, July 24, 2026
Join WhatsApp Group
HomeStateನಕಲಿ ಐಟಿಸಿ ವಂಚನೆ ಪ್ರಕರಣ: ನ್ಯಾಷನಲ್ ಟ್ರಾವೆಲ್ಸ್‌ಗೆ ನೋಟಿಸ್

ನಕಲಿ ಐಟಿಸಿ ವಂಚನೆ ಪ್ರಕರಣ: ನ್ಯಾಷನಲ್ ಟ್ರಾವೆಲ್ಸ್‌ಗೆ ನೋಟಿಸ್

ಬೆಂಗಳೂರು: ಸುಮಾರು 2 ಸಾವಿರ ಕೋಟಿ ರೂ ಮೌಲ್ಯದ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ವಂಚನೆ ಜಾಲವನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಭೇದಿಸಿದ್ದು, ಪ್ರಕರಣ ಸಂಬಂಧ ಈಗಾಗಲೇ 7 ಮಂದಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ಇದೀಗ ಇದೇ ಪ್ರಕರಣದ ತನಿಖೆಯ ಭಾಗವಾಗಿ ವಸತಿ ಸಚಿವ Zameer Ahmed Khan ಅವರಿಗೆ ಸೇರಿದ ನ್ಯಾಷನಲ್ ಟ್ರಾವೆಲ್ಸ್ ಸಂಸ್ಥೆಗೆ ನೋಟಿಸ್ ನೀಡಲಾಗಿದೆ.

ಮಹಾರಾಷ್ಟ್ರದ ಗುಜರಿ ವಸ್ತು ದಲ್ಲಾಳಿಗಳು ತೆರಿಗೆ ವಂಚನೆಗಾಗಿ ಕರ್ನಾಟಕದಿಂದ ಸ್ಕ್ರ್ಯಾಪ್ ಸಾಗಿಸುತ್ತಿರುವಂತೆ ನಕಲಿ ಕಂಪನಿಗಳ ಹೆಸರಿನಲ್ಲಿ ಸುಳ್ಳು ಬಿಲ್‌ಗಳನ್ನು ಸೃಷ್ಟಿಸುತ್ತಿದ್ದರೆಂಬ ಆರೋಪ ಕೇಳಿಬಂದಿದೆ. ‘ಟಂಗ್‌ಸ್ಟನ್ ಕಾರ್ಬೈಡ್ ಸ್ಕ್ರ್ಯಾಪ್’ ಹೆಸರಿನಲ್ಲಿ ಈ ವಂಚನೆ ನಡೆಯುತ್ತಿದ್ದು, ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ತೆರಳುವ ಸರಕು ಸಾಗಣೆ ವಾಹನಗಳನ್ನು ಬಳಸಲಾಗುತ್ತಿತ್ತು.

ತನಿಖೆಯ ಪ್ರಕಾರ, ನ್ಯಾಷನಲ್ ಟ್ರಾವೆಲ್ಸ್ ಗುತ್ತಿಗೆ ಪಡೆದಿದ್ದ ಲಾರಿಗಳು ಸೇರಿ ತಿಂಗಳಿಗೆ 20ರಿಂದ 25 ಬಾರಿ ಸ್ಕ್ರ್ಯಾಪ್ ಸಾಗಾಟವಾಗುತ್ತಿರುವಂತೆ ನಕಲಿ ಇ-ವೇ ಬಿಲ್‌ಗಳನ್ನು ಸೃಷ್ಟಿಸಲಾಗುತ್ತಿತ್ತು. ಆದರೆ ವಾಸ್ತವದಲ್ಲಿ ವಾಹನಗಳಲ್ಲಿ ಯಾವುದೇ ಗುಜರಿ ವಸ್ತುಗಳಿರಲಿಲ್ಲ. ಕೇವಲ ನಕಲಿ ದಾಖಲೆಗಳನ್ನೇ ಹಂತ ಹಂತವಾಗಿ ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಬೆಂಗಳೂರಿನಲ್ಲಿ ಟಂಗ್‌ಸ್ಟನ್ ಸ್ಕ್ರ್ಯಾಪ್ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿಲ್ಲದಿದ್ದರೂ, ಇಲ್ಲಿಂದ ಭಾರೀ ಪ್ರಮಾಣದ ರಫ್ತು ದಾಖಲೆಗಳು ಸೃಷ್ಟಿಯಾಗಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಸುಮಾರು 217 ಕೋಟಿ ರೂ ಮೌಲ್ಯದ ವ್ಯವಹಾರ ತೋರಿಸಿ 39 ಕೋಟಿ ರೂ ತೆರಿಗೆ ಕ್ರೆಡಿಟ್ ಬಿಲ್‌ಗಳನ್ನು ಸೃಷ್ಟಿಸಲಾಗಿತ್ತು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ವಿಸ್ತೃತ ತನಿಖೆ ಕೈಗೊಂಡಿದ್ದು, ವಂಚನೆ ಜಾಲದ ಹಿಂದಿರುವ ಪ್ರಮುಖ ಸಂಪರ್ಕಗಳ ಪತ್ತೆಗೆ ಮುಂದಾಗಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share