ವಿರಾಮದ ಬಳಿಕ ಭಟ್ಕಳದಲ್ಲಿ ಮೈಕೊಡವಿದ ಹಿಂದೂ ಫೈರ್ ಬ್ರಾಂಡ್ ಅನಂತ ಕುಮಾರ್ ಹೆಗಡೆ
ಭಟ್ಕಳ: ಈ ದೇಶದಲ್ಲಿ ಜಾತಿಗೆ ಎಂದಿಗೂ ಬೆಲೆ ಇರಲಿಲ್ಲ. ಯೋಗ್ಯತೆಗೆ ಮಾತ್ರ ಮಹತ್ವವಿತ್ತು. ವಾಲ್ಮೀಕಿ, ವಿಶ್ವಾಮಿತ್ರರಂತಹ ಅನೇಕ ಋಷಿಗಳು ಬ್ರಾಹ್ಮಣರಲ್ಲ. ಇತಿಹಾಸ ಓದಿದರೆ ಸತ್ಯ ತಿಳಿಯುತ್ತದೆ ಎಂದು ಮಾಜಿ ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮಗಳು, ವೇದಿಕೆ ಭಾಷಣಗಳಿಂದ ದೂರವೇ ಉಳಿದಿದ್ದ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರು ಭಟ್ಕಳ ನಗರದ ಹಳೆ ಬಸ್ ನಿಲ್ದಾಣದ ಬಳಿ ಆಯೋಜಿಸಿದ್ದ ‘ಹಿಂದೂ ಸಂಗಮ’ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಜಾತ್ಯತೀತತೆ ಎಂದರೆ ಅದು ಹಿಂದೂತ್ವ. ಬೇರೆ ದೇಶಗಳಿಂದ ಬಂದವರಿಗೆ ಮಸೀದಿ, ಚರ್ಚ್ ಕಟ್ಟಲು ಅವಕಾಶ ನೀಡಿದ್ದೇವೆ. ಅದರಿಂದಲೇ ನಮ್ಮ ಸಮಾಜದ ಸಹಿಷ್ಣುತೆ ಗೊತ್ತಾಗುತ್ತದೆ. ತಾಕತ್ತಿದ್ದರೆ ಬಾಂಗ್ಲಾದೇಶಕ್ಕೆ ಹೋಗಿ ಜಾತ್ಯತೀತತೆಯ ಪಾಠ ಮಾಡಲಿ ಎಂದು ಸವಾಲು ಹಾಕಿದರು.
ನಮ್ಮನ್ನು ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಸೋಲಿಸಿಲ್ಲ. ಹಿಂದೂಗಳನ್ನು ಸೋಲಿಸಿದ್ದು ಹಿಂದೂಗಳಲ್ಲಿಯೇ ಇರುವ ದ್ರೋಹಿಗಳು. ನಾವು ಒಂದಾಗದಿದ್ದರೆ ನಮ್ಮ ಪರಿಸ್ಥಿತಿ ‘ಗೋವಿಂದ ಗೋವಿಂದ’ ಆಗಲಿದೆ ಎಂದು ಎಚ್ಚರಿಸಿದರು.
ಹಿಂದೂಗಳು ತಾಯಿ ನೆಲವನ್ನು ಪೂಜಿಸುವವರು, ಯಾವ ದೇಶದಲ್ಲಿ ನಾವಿರುತ್ತೇವೆಯೋ ಅಲ್ಲಿನ ನೆಲವನ್ನು ಪೂಜಿಸುತ್ತೇವೆ. ಅಮೇರಿಕದಲ್ಲಿನ ಭಾರತೀಯರು ದೇಶವನ್ನು ಕಟ್ಟುವನ್ನು ಪ್ರಮುಖ ಪಾತ್ರ ವಹಿಸಿದ್ದಾರೆ. ಯಾವುದೇ ದೇಶದಲ್ಲಿರಲಿ ಅಲ್ಲಿನ ಸಂಸ್ಕೃತಿಯನ್ನು ನೆಲವನ್ನು ಗೌರವಿಸುವ ಧರ್ಮ ನಮ್ಮದು ಎಂದರು.
ಬ್ರಾಹ್ಮಣ್ಯದ ಬಗ್ಗೆ ಇಂದು ಬಹು ಚರ್ಚೆ ನಡೆಯುತ್ತಿದೆ. ಮನುಸ್ಮೃತಿಯನ್ನು ಓದಿದವರು ಯಾರೂ ಕೂಡಾ ಚರ್ಚೆ ಮಾಡುತ್ತಿಲ್ಲ. ಕಾರಣ ನಮ್ಮಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ. ನಮ್ಮ ಋಷಿಮುನಿಗಳಲ್ಲಿ ಶೇ.90ರಷ್ಟು ಋಷಿಮುನಿಗಳು ಬ್ರಾಹ್ಮಣರೇ ಅಲ್ಲ, ಜಾತಿಯಿಂದ ಯಾರನ್ನು ಗುರುತಿಸಿಲ್ಲ, ಅವರ ಯೋಗ್ಯತೆಯಿಂದ ಗುರುತಿಸಲಾಗಿದೆ ಎಂದರು.
ಸಂಘಟನೆಗಳ ಬಗ್ಗೆ ಉಲ್ಲೇಖಿಸಿದ ಅವರು, ಕೆಲವರು ಆರ್ಎಸ್ಎಸ್ನ್ನು ಮುಗಿಸುತ್ತೇವೆ ಎನ್ನುವವರು ಭ್ರಮೆಯಲ್ಲಿ ಇದ್ದಾರೆ. ಹುಲಿ ಅಥವಾ ಸಿಂಹವನ್ನು ಯಾರೂ ದೇವರಿಗೆ ಬಲಿ ಕೊಡುವುದಿಲ್ಲ, ಕುರಿಯನ್ನಷ್ಟೇ ಬಲಿ ಕೊಡುತ್ತಾರೆ. ನಮ್ಮ ಸಂಘಟನೆಯನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಣ ಕೇವಲ ಹಣ ಮಾಡುವ ಸಾಧನವಾಗಬಾರದು. ಸಂಸ್ಕಾರಯುತ ಬದುಕಿಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಸುಮಾರು 3 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದ ಸಮಾವೇಶದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಭಟ್ಕಳ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.