ಗೋಕರ್ಣ: ಮನೆಯ ಎದುರಿನ ಜಾಗದಲ್ಲಿದ್ದ ಹೂವಿನ ಗಿಡಗಳನ್ನು ಕೀಳುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬರನ್ನು ದೂಡಿ ಹಾಕಿ ಹಲ್ಲೆ ನಡೆಸಿ, ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ ಆರೋಪದಡಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಮಟಾ ತಾಲೂಕಿನ ಬಿಜ್ಜೂರು ಗ್ರಾಮದ ಮಹಾಬಲೇಶ್ವರ ಮಂಕಾಳಿ ಗೌಡ (50) ಅವರು ನೀಡಿರುವ ಖಾಸಗಿ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಬಿಜ್ಜೂರು ಗ್ರಾಮದ ರುದ್ರಪಾದ ನಿವಾಸಿ ದಿವಾಕರ ಮಹಾಬಲೇಶ್ವರ ಗೌಡ (32) ವಿರುದ್ಧ ಆರೋಪ ಮಾಡಲಾಗಿದೆ.
ಆ.31ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಬಿಜ್ಜೂರು ಗ್ರಾಮದ ತಮ್ಮ ಮನೆಯ ಎದುರಿನ ಜಾಗದಲ್ಲಿ ದಿವಾಕರ ಅವರು ಹೂವಿನ ಗಿಡಗಳನ್ನು ಕೀಳುತ್ತಿದ್ದಾಗ, ಇದನ್ನು ಪ್ರಶ್ನಿಸಿದ್ದಕ್ಕೆ ಏಕಾಏಕಿ ತಮ್ಮನ್ನು ದೂಡಿ ಹಾಕಿ ಎಡಗೈಯಿಂದ ಬೆನ್ನು ಹಾಗೂ ಕೆನ್ನೆಯ ಮೇಲೆ ಹೊಡೆದಿದ್ದಾರೆ ಎಂದು ಮಹಾಬಲೇಶ್ವರ ಗೌಡ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ ಅವಾಚ್ಯವಾಗಿ ಬೈದು, ಮಾತು ಮುಂದುವರಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ತನಿಖೆ ಕೈಗೊಳ್ಳುವಂತೆ ನ್ಯಾಯಾಲಯ ಆದೇಶಿಸಿದ್ದು, ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


