ಶಿರಸಿ: ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರು ಕಾರವಾರದಲ್ಲಿ ಕಾಂಗ್ರೆಸ್ ಪಕ್ಷದವರೊಂದಿಗೆ ಸೇರಿ ಪ್ರತಿಭಟನೆಯಲ್ಲಿ ಭಾಗವಹಿಸಿ ಬಿಜೆಪಿ ವಿರುದ್ಧ ಮಾತನಾಡಿರುವುದಕ್ಕೆ ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರೇಮ್‌ಕುಮಾರ್ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೆಬ್ಬಾರ್ ಅವರಿಗೆ ಬಿಜೆಪಿಯ ವಿರುದ್ಧ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿರುವ ಅವರು, ಹೆಬ್ಬಾರ್ ಅವರು ಪಕ್ಷದಿಂದ ಉಚ್ಛಾಟನೆಯಾಗಿರಬುದು. ಆದರೆ ಬಿಜೆಪಿ ಚಿಹ್ನೆಯಡಿ ಗೆದ್ದಿರುವ ಅವರ ಶಾಸಕ ಸ್ಥಾನ ಇನ್ನೂ ಉಳಿದಿದೆ. ಅದು ಬಿಜೆಪಿ ಕಾರ್ಯಕರ್ತರು ನೀಡಿದ ಭಿಕ್ಷೆ ಎಂದು ಟೀಕಿಸಿದ್ದಾರೆ.
ಬಿಜೆಪಿ ವಿರುದ್ಧ ಮಾತನಾಡುವ ನೈತಿಕತೆ ಬರಬೇಕಾದರೆ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜನತಾ ನ್ಯಾಯಾಲಯಕ್ಕೆ ಬರಬೇಕು ಎಂದು ಪ್ರೇಮ್‌ಕುಮಾರ್ ನಾಯ್ಕ್ ಆಗ್ರಹಿಸಿದ್ದಾರೆ.
ಬಿಜೆಪಿಗೆ ಸೇರಿದರೆ ‘ವಾಷಿಂಗ್ ಮಷೀನ್’ ಎಂಬ ಹೇಳಿಕೆ ನೀಡಿದ್ದ ಹೆಬ್ಬಾರ್ ಅವರು, ತಾವು ಎಷ್ಟು ಅಕ್ರಮಗಳಲ್ಲಿ ಭಾಗಿಯಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದೀರಿ ಎಂಬುದನ್ನೂ ಬಹಿರಂಗಪಡಿಸಬೇಕು.
ಹೆಬ್ಬಾರ್ ಸೇರಿದಂತೆ ಕೆಲವರು ಮಾಡಿದ ಅಕ್ರಮಗಳಿಂದ ಬಿಜೆಪಿ ವಿರೋಧ ಪಕ್ಷದಲ್ಲಿ ಕೂರುವ ಪರಿಸ್ಥಿತಿಗೆ ತಲುಪಿದೆ. ಆರೋಪಕ್ಕೆ ಒಳಗಾದವರು ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ ಬಿಜೆಪಿಯನ್ನು ವಿರೋಧಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಒಂದು ಅವಧಿಗೆ ಶಾಸಕರಾಗಿ ಕೆಲವೇ ತಿಂಗಳು ಸಚಿವರಾಗಿದ್ದ ಹೆಬ್ಬಾರ್ ಅವರು ಸಾವಿರಾರು ಕೋಟಿ ರೂ. ವೆಚ್ಚದ ಬೃಹತ್ ಸಕ್ಕರೆ ಕಾರ್ಖಾನೆ ನಿರ್ಮಿಸಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿರುವ ಪ್ರೇಮ್‌ಕುಮಾರ್ ನಾಯ್ಕ, ಅಕ್ರಮ ಹಣಕಾಸು ವ್ಯವಹಾರಗಳ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ಶೋಧ ನಡೆಸುವುದು ಸಾಮಾನ್ಯ ಪ್ರಕ್ರಿಯೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗಲೂ ಇಂತಹ ಪ್ರಕ್ರಿಯೆಗಳು ನಡೆದಿವೆ ಎಂದು ಹೇಳಿದ್ದಾರೆ.
ತಮ್ಮ ವಿರುದ್ಧದ ಆರೋಪಗಳನ್ನು ಮುಚ್ಚಿಕೊಳ್ಳಲು ಯಾವುದೇ ನಾಟಕದ ಅಗತ್ಯವಿಲ್ಲ. ಬಿಜೆಪಿಯ ವಿರುದ್ಧ ಮಾತನಾಡುವ ನೈತಿಕತೆ ಬೇಕಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜನತಾ ನ್ಯಾಯಾಲಯಕ್ಕೆ ಬರಬೇಕು ಎಂದು ಅವರು ಪುನರುಚ್ಛರಿಸಿದ್ದಾರೆ.


