ಹೊನ್ನಾವರ: ಪಟ್ಟಣದ ಬಂದರು ರಸ್ತೆಯ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ ಓರ್ವನನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದು, ಆತನಿಂದ 116 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಹೊನ್ನಾವರ ನಗರದ ಮಹಾಲಕ್ಷ್ಮೀ ಗ್ಯಾಸ್ ಗೋಡೌನ್ ಸಮೀಪದ ಬಂದರು ರಸ್ತೆಯ ಬದಿಯಲ್ಲಿ ಮಂಗಳವಾರ ಸಂಜೆ ಸುಮಾರು 6 ಗಂಟೆ ವೇಳೆಗೆ ಆರೋಪಿ ಮಹಮ್ಮದ್ ಅಲ್ತಾಫ್ ಬೆಟ್ಕುಳಿಕರ್ (30) ಎಂಬಾತ ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೆ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಹೊಂದಿದ್ದಾನೆಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಸುಮಾರು 6 ಸಾವಿರ ರೂ ಮೌಲ್ಯದ 116 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಗಾಂಜಾ ಪ್ಯಾಕಿಂಗ್ಗೆ ಬಳಸಲಾಗಿದೆ ಎನ್ನಲಾದ ವಿವಿಧ ಗಾತ್ರದ ಖಾಲಿ ಪ್ಲಾಸ್ಟಿಕ್ ಕವರ್ಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಕಾಸರಕೋಡದ ತೌಹೀದ್ ಹಾಗೂ ಹೊನ್ನಾವರದ ನಾಗರಾಜ ಆಚಾರಿಯವರ ಹೆಸರುಗಳೂ ಆರೋಪಿಗಳ ಪಟ್ಟಿಯಲ್ಲಿವೆ. ಗಾಂಜಾವನ್ನು ಮಾರಾಟ ಮಾಡಲು ಮೊದಲ ಆರೋಪಿಗೆ ನೀಡಿರುವ ಬಗ್ಗೆ ತನಿಖೆಯಲ್ಲಿ ಮಾಹಿತಿ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.