ಹೊನ್ನಾವರ: ಪಟ್ಟಣದ ಬಂದರು ರಸ್ತೆಯ ಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ನಾಲ್ವರನ್ನು ಹೊನ್ನಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೆ. 6ರಂದು ಸಂಜೆ 6.36ರ ಸುಮಾರಿಗೆ ಪೊಲೀಸರು ದಾಳಿ ನಡೆಸಿದ ವೇಳೆ ಆರೋಪಿತರು ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿಕೊಂಡು ಅಂದರ್-ಬಾಹರ್ ಜೂಜಾಟ ಆಡುತ್ತಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದಾಳಿಯ ವೇಳೆ ₹720 ನಗದು, 52 ಇಸ್ಪೀಟ್ ಎಲೆಗಳು ಹಾಗೂ ‘ಇಸ್ಪೀಟ್ ಖಾನಾ’ ಎಂದು ಬರೆಯಲಾಗಿರುವ ಕೆಂಪು, ಹಸಿರು ಮತ್ತು ಬಿಳಿ ಬಣ್ಣದ ರಟ್ಟಿನ ಮಂಡಲ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ಕಿ-ಕೋಣಕಾರದ ಗಣೇಶ ಮಂಜುನಾಥ ಭಂಡಾರಿ (30), ಶ್ರೀಧರ ಮಂಜುನಾಥ ಭಂಡಾರಿ (30), ಹೊನ್ನಾವರದ ಸೂರಜ ಸತೀಶ ಹರಿಜನ (24) ಹಾಗೂ ಕುಮಟಾದ ಚೇತನ ರಾಮಚಂದ್ರ ನಾಯ್ಕ (28) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯ ಪಿಎಸ್ಐ (ಕಾ.ಸು) ಮಂಜುನಾಥ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.