ಮನೆಯ ಮುಂದೆ ಅರಳಿರುವ ಗುಲಾಬಿ, ದಾಸವಾಳ ಅಥವಾ ಇತರ ಅಲಂಕಾರಿಕ ಹೂವಿನ ಗಿಡಗಳು ಕಣ್ಣಿಗೆ ಹಬ್ಬ. ಆದರೆ ಕೆಲವೊಮ್ಮೆ ಗಿಡಗಳು ಚೆನ್ನಾಗಿ ಬೆಳೆದು ಹಚ್ಚಹಸಿರಾಗಿದ್ದರೂ ಹೂ ಮಾತ್ರ ಬೆರಳೆಣಿಕೆಯಷ್ಟೇ! ಇದರಿಂದ ಗಿಡವನ್ನು ಪ್ರೀತಿಯಿಂದ ಪೋಷಿಸಿ ಬೆಳೆಸಿದವರಿಗೆ ಬೇಸರವಾಗುವುದು ಸಹಜ.
ವಾಸ್ತವವಾಗಿ, ಹೂ ಬಿಡದಿರುವುದಕ್ಕೆ ಹಲವು ಕಾರಣಗಳಿರುತ್ತವೆ. ಸೂರ್ಯನ ಬೆಳಕಿನ ಕೊರತೆ, ಮಣ್ಣಿನಲ್ಲಿ ಪೋಷಕಾಂಶಗಳ ಅಸಮತೋಲನ, ಅತಿಯಾದ ನೀರು ಅಥವಾ ಸರಿಯಾದ ಪ್ರೋನಿಂಗ್ ಇಲ್ಲದಿರುವುದು ಪ್ರಮುಖ ಕಾರಣ. ಆದರೆ ರಾಸಾಯನಿಕ ಗೊಬ್ಬರಗಳ ಮೊರೆ ಹೋಗದೆ ಮನೆಯಲ್ಲೇ ಸಿಗುವ ಕೆಲವು ವಸ್ತುಗಳನ್ನು ಬಳಸಿ ಹೂವಿನ ಉತ್ಪಾದನೆಯನ್ನು ಹೆಚ್ಚಿಸಬಹುದು.
ಹೂ ಬಿಡುವ ಗಿಡಗಳಿಗೆ ಅಗತ್ಯ ಪೋಷಕಾಂಶಗಳಲ್ಲಿ ಪೊಟ್ಯಾಶಿಯಂ ಪ್ರಮುಖವಾಗಿದೆ ಎಂಬುದು ಗಮನಕ್ಕಿರಲಿ. ಮನೆಯಲ್ಲೇ ದೊರೆಯುವ ಬಾಳೆಹಣ್ಣಿನ ಸಿಪ್ಪೆ ಇದಕ್ಕೆ ಉತ್ತಮ ಮೂಲ. ಬಾಳೆಹಣ್ಣಿನ ಸಿಪ್ಪೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಗಿಡದ ಬುಡದ ಸುತ್ತ ಮಣ್ಣಿನಲ್ಲಿ ಹೂತರೆ ನಿಧಾನವಾಗಿ ಪೋಷಕಾಂಶ ಬಿಡುಗಡೆಯಾಗಿ ಹೂ ಬಿಡಲು ನೆರವಾಗುತ್ತದೆ.
ಮೊಟ್ಟೆಯ ಸಿಪ್ಪೆಗಳೂ ಉಪಯುಕ್ತ. ಅವುಗಳಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು ಬೇರುಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಮೊಟ್ಟೆಯ ಸಿಪ್ಪೆಗಳನ್ನು ಒಣಗಿಸಿ ಪುಡಿ ಮಾಡಿ ತಿಂಗಳಿಗೊಮ್ಮೆ ಗಿಡದ ಬುಡಕ್ಕೆ ಹಾಕಿದರೆ ಉತ್ತಮ ಫಲಿತಾಂಶ ಸಿಗುತ್ತದೆ.ಅಕ್ಕಿ ತೊಳೆದ ನೀರನ್ನು ಸಹ ವ್ಯರ್ಥ ಮಾಡಬೇಡಿ. ಈ ನೀರಿನಲ್ಲಿ ಸೂಕ್ಷ್ಮ ಪೋಷಕಾಂಶಗಳಿದ್ದು ವಾರಕ್ಕೊಮ್ಮೆ ಗಿಡಗಳಿಗೆ ಹಾಕಿದರೆ ಬೆಳವಣಿಗೆ ಉತ್ತಮವಾಗುತ್ತದೆ. ಆದರೆ ಅಕ್ಕಿ ತೊಳೆದ ನೀರನ್ನು ಹೆಚ್ಚು ದಿನ ಸಂಗ್ರಹಿಸದೆ ತಾಜಾವಾಗಿಯೇ ಬಳಸುವುದು ಒಳ್ಳೆಯದು.
ಅಡುಗೆ ಮನೆಯಲ್ಲಿ ಉಳಿಯುವ ತರಕಾರಿ ಸಿಪ್ಪೆಗಳು, ಹಣ್ಣುಗಳ ತ್ಯಾಜ್ಯ ಮತ್ತು ಒಣ ಎಲೆಗಳಿಂದ ತಯಾರಿಸಿದ ಕಾಂಪೋಸ್ಟ್ ಗೊಬ್ಬರ ಹೂವಿನ ಗಿಡಗಳಿಗೆ ಅತ್ಯುತ್ತಮ ಬೂಸ್ಟರ್. ತಿಂಗಳಿಗೊಮ್ಮೆ ಕಾಂಪೋಸ್ಟ್ ಹಾಕಿದರೆ ಮಣ್ಣಿನ ಗುಣಮಟ್ಟ ಸುಧಾರಿಸಿ ಧಾರಾಳ ಹೂ ಬಿಡುತ್ತದೆ.
ದಾಸವಾಳ ಮತ್ತು ಗುಲಾಬಿ ಗಿಡಗಳಿಗೆ ಕಾಫಿ ಪುಡಿಯನ್ನೂ ಮಿತವಾಗಿ ಬಳಸಬಹುದು. ಬಳಸಿ ಉಳಿದ ಕಾಫಿ ಪುಡಿಯನ್ನು ಒಣಗಿಸಿ ಸ್ವಲ್ಪ ಪ್ರಮಾಣದಲ್ಲಿ ಮಣ್ಣಿನೊಂದಿಗೆ ಬೆರೆಸಿದರೆ ಗಿಡಗಳಿಗೆ ಅಗತ್ಯ ಪೋಷಕಾಂಶ ದೊರೆಯುತ್ತದೆ.
ಗಿಡಗಳಿಗೆ ಗೊಬ್ಬರ ಹಾಕಿದಷ್ಟೇ ಮುಖ್ಯವಾಗಿ ಪ್ರತಿದಿನ ಕನಿಷ್ಠ 5ರಿಂದ 6 ಗಂಟೆಗಳ ನೇರ ಸೂರ್ಯನ ಬೆಳಕು ಸಿಗುವುದು ಅಗತ್ಯ. ವಿಶೇಷವಾಗಿ ಗುಲಾಬಿ ಗಿಡಗಳು ಸಾಕಷ್ಟು ಸೂರ್ಯನ ಬೆಳಕು ಪಡೆದಾಗ ಹೆಚ್ಚು ಹೂ ಬಿಡುತ್ತವೆ.ಹೂ ಬಿಟ್ಟ ನಂತರ ಒಣಗಿದ ಹೂವುಗಳು ಮತ್ತು ದುರ್ಬಲ ಕೊಂಬೆಗಳನ್ನು ನಿಯಮಿತವಾಗಿ ಕತ್ತರಿಸುವುದು ಕೂಡ ಮುಖ್ಯ.
ಇದರಿಂದ ಗಿಡದ ಶಕ್ತಿ ಹೊಸ ಮೊಗ್ಗುಗಳ ನಿರ್ಮಾಣಕ್ಕೆ ಬಳಸಲ್ಪಡುತ್ತದೆ. ಹಳೆಯ ಹೂಗಳನ್ನು ತೆಗೆದುಹಾಕದಿದ್ದರೆ ಗಿಡ ಮತ್ತೆ ಹೂ ಬಿಡುವ ಪ್ರಮಾಣ ಕಡಿಮೆಯಾಗಬಹುದು.ನೀರಿನ ವಿಷಯದಲ್ಲೂ ಎಚ್ಚರಿಕೆ ಅಗತ್ಯ.
ಪ್ರತಿದಿನ ನೀರು ಸುರಿಯುವುದೇ ಉತ್ತಮ ಎನ್ನುವುದು ತಪ್ಪು ಕಲ್ಪನೆ. ಮಣ್ಣು ಸ್ವಲ್ಪ ಒಣಗಿದ ನಂತರವೇ ನೀರು ಹಾಕುವುದು ಉತ್ತಮ. ಅತಿಯಾದ ನೀರು ಬೇರು ಕೊಳೆಯುವ ಸಮಸ್ಯೆ ಉಂಟುಮಾಡಿ ಕಡಿಮೆ ಹೂ ಬಿಡಬಹುದು.
ಸಾವಯವ ತೋಟಗಾರಿಕೆಯ ಮೂಲಕವೇ ಮನೆಯಲ್ಲಿ ಸಿಗುವ ಸರಳ, ನಿರುಪಯುಕ್ತ ವಸ್ತುಗಳನ್ನು ಬಳಸಿ ಗಿಡಗಳ ಆರೋಗ್ಯ ಕಾಪಾಡಿಕೊಳ್ಳಬಹುದು. ಇಂತಹ ಸರಳ ಉಪಾಯಗಳನ್ನು ಅನುಸರಿಸಿದರೆ ಗುಲಾಬಿ, ದಾಸವಾಳ ಸೇರಿದಂತೆ ಅನೇಕ ಅಲಂಕಾರಿಕ ಗಿಡಗಳು ವರ್ಷಪೂರ್ತಿ ಹೂಗಳಿಂದ ಕಂಗೊಳಿಸಿ ಮನಕ್ಕೆ ಮುದ ನೀಡುತ್ತವೆ.