17 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ ಕಳ್ಳತನ ಪ್ರಕರಣ
ಹೊನ್ನಾವರ: ಮನೆಯಲ್ಲಿ ಇರಿಸಲಾಗಿದ್ದ 128 ಗ್ರಾಂ ಬಂಗಾರದ ಆಭರಣ ಹಾಗೂ ನಗದು ಕಳ್ಳತನ ಪ್ರಕರಣವನ್ನು ಹೊನ್ನಾವರ ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ₹17.08 ಲಕ್ಷ ಮೌಲ್ಯದ 127.5 ಗ್ರಾಂ ಬಂಗಾರದ ಆಭರಣವನ್ನು ವಶಪಡಿಸಿಕೊಂಡಿದ್ದಾರೆ.
ಫಿರ್ಯಾದಿದಾರರ ಮನೆಯಲ್ಲಿ ಕಬ್ಬಿಣದ ಟ್ರಂಕ್ನಲ್ಲಿ ಇರಿಸಲಾಗಿದ್ದ ಬಂಗಾರದ ಆಭರಣ ಮತ್ತು ನಗದು ಹಣ ಕಳ್ಳತನವಾಗಿದ್ದು, ಈ ಸಂಬಂಧ ಧನುಶ್ ತಂದೆ ಶ್ರೀಧರ ಗೌಡ ಎಂಬಾತನ ಮೇಲೆ ಸಂಶಯ ವ್ಯಕ್ತಪಡಿಸಿ ನೀಡಿದ ದೂರಿನ ಮೇರೆಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.
ಪ್ರಕರಣದ ತನಿಖೆ ವೇಳೆ ಖಚಿತ ಮಾಹಿತಿಯ ಮೇರೆಗೆ ಧನುಶ್ ಶ್ರೀಧರ ಗೌಡ, ದೇವಸ್ಥಾನಕೇರಿ ನಿವಾಸಿ ಹಾಗೂ ಕಳುವಾದ ಬಂಗಾರದ ಆಭರಣಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಿದ್ದ ಆರೋಪದ ಮೇಲೆ ಆತನ ಸ್ನೇಹಿತ ಗೌರೀಶ ಗಣಪತಿ ಗೌಡ, ಮೆಟ್ಟಿನಗದ್ದೆ, ಗೇರುಸೊಪ್ಪಾ ನಿವಾಸಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.
ವಿಚಾರಣೆ ವೇಳೆ ಧನುಶ್ ಗೌಡ ಕಳವು ಮಾಡಿದ್ದ ಬಂಗಾರದ ಆಭರಣಗಳನ್ನು ಹೊನ್ನಾವರದ ಮಣಪ್ಪುರಂ ಫೈನಾನ್ಸ್ ಮತ್ತು ಮುತ್ತೂಟ್ ಫಿನ್ಕಾರ್ಪ್ನಲ್ಲಿ ಅಡವಿಟ್ಟಿರುವುದು ಹಾಗೂ ಗೌರೀಶ ಗೌಡನ ಬಳಿ ಕೆಲ ಆಭರಣಗಳಿರುವುದು ಬೆಳಕಿಗೆ ಬಂದಿದೆ. ಆರೋಪಿಗಳಿಂದ ಒಟ್ಟು ₹17,08,300 ಮೌಲ್ಯದ 127.5 ಗ್ರಾಂ ಬಂಗಾರದ ಆಭರಣಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಕಾರ್ಯಾಚರಣೆ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಕೃಷ್ಣಮೂರ್ತಿ ಹಾಗೂ ಭಟ್ಕಳ ಉಪವಿಭಾಗದ ಡಿವೈಎಸ್ಪಿ ಗಿರೀಶ ಬಿ. ಅವರ ಮಾರ್ಗದರ್ಶನದಲ್ಲಿ ನಡೆಯಿತು. ಹೊನ್ನಾವರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಎಸ್. ಅವರ ನೇತೃತ್ವದಲ್ಲಿ, ಪಿಎಸ್ಐ ಮಹಾಂತೇಶ ವಾಲ್ಮೀಕಿ, ಪಿಎಸ್ಐ ಸಂಗೀತಾ, ಪ್ರೊಬೇಷನರಿ ಪಿಎಸ್ಐ ರೇಣುಕಾ ಹಾಗೂ ಸಿಬ್ಬಂದಿಗಳಾದ ಗಜಾನನ ನಾಯ್ಕ, ಮನೋಜ್ ಡಿ., ರವಿ ನಾಯ್ಕ ಮತ್ತು ಸಚಿನ್ ನಾಯ್ಕ ಆರೋಪಿಗಳನ್ನು ಬಂಧಿಸಿ ಕಳುವಾದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಇಲಾಖೆ ಅಭಿನಂದಿಸಿ ಪ್ರಶಂಸಿಸಿದೆ.