ಯಲ್ಲಾಪುರ: ಇಂದಿನ ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆಗಳಲ್ಲಿ ಮುಂಚೂಣಿಯಲ್ಲಿದ್ದಾಳೆ. ಆದರೆ ಅನೇಕ ಮಹಿಳೆಯರು ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆ ಸೂಕ್ತ ಕಾಳಜಿ ವಹಿಸದೆ ನಮ್ಮ ಶೋಷಣೆಯನ್ನು ನಾವೇ ಮಾಡಿಕೊಳ್ಳುತ್ತಿದ್ದೇವೆ. ನಮಗೆ ನಾವೇ ನೀಡಬಹುದಾದ ಅತ್ಯುತ್ತಮ ಕೊಡುಗೆ ಆರೋಗ್ಯವೇ ಆಗಿದೆ ಎಂದು ತಾಲೂಕು ಆಸ್ಪತ್ರೆಯ ವೈದ್ಯೆ ಡಾ. ಸೌಮ್ಯ ಕೆ.ವಿ. ಹೇಳಿದರು.
ಪಟ್ಟಣದ ಮಹಿಳಾ ಮಂಡಲ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಖಿನ್ನತೆ ಇಂದು ಸಾಮಾನ್ಯವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳಬೇಕು. ಮೊಬೈಲ್ ದಾಸರಾಗದೆ, ಜಾಲತಾಣಗಳ ಗುಲಾಮರಾಗದೆ ಅವುಗಳನ್ನು ಒಳ್ಳೆಯ ಕೌಶಲ್ಯಗಳನ್ನು ಕಲಿಯಲು ಬಳಸಬೇಕು. ಪ್ರತಿದಿನ ಸ್ವಲ್ಪ ಸಮಯವನ್ನು ನಿಮಗಾಗಿ ಮೀಸಲಿಟ್ಟು ಧ್ಯಾನ ಹಾಗೂ ಪ್ರಾಣಾಯಾಮ ಮಾಡುವ ಮೂಲಕ ಮನಸ್ಸನ್ನು ನೆಮ್ಮದಿಯಿಂದ ಇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರಭಾವತಿ ಗೋವಿ ಮಾತನಾಡಿ, ಹೆಣ್ಣು ಜಾಗೃತಳಾದರೆ ಸಮಾಜ ಜಾಗೃತವಾಗುತ್ತದೆ. ಕುಟುಂಬದ ಕಣ್ಣಾದ ಮಹಿಳೆಯರು ಹೆಚ್ಚಿನ ಶಿಕ್ಷಣ ಪಡೆದು ಸ್ವಾವಲಂಬಿಯಾಗುವುದರ ಜೊತೆಗೆ ಕೌಟುಂಬಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು. ಇತ್ತೀಚೆಗೆ ಒಬ್ಬಂಟಿ ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ. ಮಹಿಳೆಯರು ಸಂಸ್ಕಾರದೊಂದಿಗೆ ಸ್ವರಕ್ಷಣಾ ಕೌಶಲ್ಯಗಳನ್ನು ಕಲಿಯುವುದು ಅನಿವಾರ್ಯವಾಗಿದೆ ಎಂದರು.
ಯಾವುದೇ ಸಮಸ್ಯೆಯಲ್ಲಿ ಸಿಲುಕಿದಾಗ ಅದನ್ನು ಮುಚ್ಚುಮರೆ ಮಾಡದೇ ಕುಟುಂಬದವರ ಹಾಗೂ ಆತ್ಮೀಯರ ಸಹಕಾರ ಪಡೆದು ಧೈರ್ಯದಿಂದ ಎದುರಿಸುವ ಮನೋಬಲವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷೆ ಚಂದನ ಗುಡಿಗಾರ್ ಉಪಸ್ಥಿತರಿದ್ದರು. ಸಮನ್ವಯಾಧಿಕಾರಿ ನಿರ್ಮಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಾ ಪ್ರತಿನಿಧಿ ಅನಿತಾ ದೇಸಾಯಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯೆ ವೀಣಾ ಭಟ್ ವಂದಿಸಿದರು.