Friday, July 24, 2026
Join WhatsApp Group
HomeInformationʻಆಕಳಿಕೆʼಯೂ ಸಾಂಕ್ರಾಮಿಕವೇ? ಆಕಳಿಸುವ ಮುನ್ನ ಇದನ್ನೊಮ್ಮೆ ಓದಿ!

ʻಆಕಳಿಕೆʼಯೂ ಸಾಂಕ್ರಾಮಿಕವೇ? ಆಕಳಿಸುವ ಮುನ್ನ ಇದನ್ನೊಮ್ಮೆ ಓದಿ!

ಈಗಂತೂ ಮದುವೆ ಸೀಜನ್‌ ಅಲ್ವಾ, ಯಾವುದೋ ಒಂದು ಮದುವೆ ಮೆನೆಗೆ ಹೋಗಿದ್ದೀರಿ. ಅಲ್ಲಿ ಯಾರೋ ಒಬ್ಬ ಬಾಯಿತೆರೆದು ಆಕಳಿಸಿದರೆ ಸಾಕು, ಕ್ಷಣಾರ್ಧದಲ್ಲೇ ಇನ್ನಿಬ್ಬರು-ಮೂರು ಜನ ಕೂಡ ಯಾವುದೋ ವಶೀಕರಣಕ್ಕೆ ಒಳಗಾದವರಂತೆ ತಾವೂ ಆಕಳಿಸುತ್ತಾರೆ!

 ಈ ಸಣ್ಣ ಅನುಭವ ಎಲ್ಲರಿಗೂ ಪರಿಚಿತ. ಹೀಗಿರಲು, “ಆಕಳಿಕೆಯೂ ಸಾಂಕ್ರಾಮಿಕವೇ?” ಎಂಬ ಪ್ರಶ್ನೆ ಸಹಜವಾಗಿಯೇ ಮನಸ್ಸಿಗೆ ಬರುತ್ತದೆ. ನಿಜ ಹೇಳಬೇಕಾದರೆ, ಇದು ಕೇವಲ ಕುತೂಹಲದ ಪ್ರಶ್ನೆಯಷ್ಟೇ ಅಲ್ಲ, ಮಾನವ ಮೆದುಳಿನ ಸೂಕ್ಷ್ಮ ಕಾರ್ಯವಿಧಾನವನ್ನು ತೋರಿಸುವ ಒಂದು ಆಸಕ್ತಿದಾಯಕ ವಿಚಾರ.

ಮೊದಲು ಆಕಳಿಕೆಯ ಮೂಲ ಸ್ವಭಾವವನ್ನು ನೋಡೋಣ. ಆಕಳಿಕೆ ಎನ್ನುವುದು ದೇಹದ ಒಂದು ಸ್ವಾಭಾವಿಕ ಪ್ರತಿಕ್ರಿಯೆ. ಸಾಮಾನ್ಯವಾಗಿ ನಿದ್ರೆಯ ಕೊರತೆ, ದೇಹದ ಆಯಾಸ, ಬೇಸರ ಅಥವಾ ಗಮನದ ಕ್ಷೀಣತೆ ಇವುಗಳ ಸಂದರ್ಭಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ.

ಕೆಲ ವಿಜ್ಞಾನಿಗಳ ಅಭಿಪ್ರಾಯದ ಪ್ರಕಾರ, ಆಕಳಿಸುವುದರಿಂದ ಮೆದುಳಿಗೆ ಹೆಚ್ಚುವರಿ ಆಮ್ಲಜನಕ ದೊರೆಯುತ್ತದೆ ಮತ್ತು ಅದರ ತಾಪಮಾನವನ್ನು ನಿಯಂತ್ರಿಸಲು ಸಹಾಯವಾಗುತ್ತದೆ. ಅಂದರೆ, ಇದು ದೇಹವನ್ನು “ರೀಸೆಟ್” ಮಾಡುವ ಒಂದು ವಿಧಾನ ಎನ್ನಬಹುದು.

ಆದರೆ, ಇಲ್ಲಿ ಆಸಕ್ತಿದಾಯಕ ಅಂಶ ಏನೆಂದರೆ, ಆಕಳಿಕೆ ಕೇವಲ ದೈಹಿಕ ಪ್ರತಿಕ್ರಿಯೆಯಷ್ಟೇ ಅಲ್ಲ, ಅದು ಸಾಮಾಜಿಕ ಪ್ರತಿಕ್ರಿಯೆಯೂ ಹೌದು. ಒಬ್ಬ ಆಕಳಿಸುವುದನ್ನು ನೋಡಿದಾಗ, ಕೇಳಿದಾಗ ಅಥವಾ ಅದರ ಬಗ್ಗೆ ಯೋಚಿಸಿದಾಗಲೂ ನಮ್ಮಲ್ಲೂ ಆಕಳಿಕೆ ಹುಟ್ಟುವುದು ಸಾಮಾನ್ಯ.

ಇದರ ಹಿಂದೆ ಕಾರ್ಯನಿರ್ವಹಿಸುವುದು ಮೆದುಳಿನ “ಮಿರರ್ ನ್ಯೂರಾನ್ಸ್” ಎಂಬ ವ್ಯವಸ್ಥೆ. ಇವು ನಮ್ಮ ಸುತ್ತಲಿನವರ ನಡೆ-ನುಡಿಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುವ ನ್ಯೂರಾನ್ಸ್‌. ಇವುಗಳ ಪರಿಣಾಮವಾಗಿ, ನಾವು ಇತರರ ಕ್ರಿಯೆಗಳನ್ನು ಅಜಾಗರೂಕವಾಗಿ ಅನುಕರಿಸುತ್ತೇವೆ. ಆಕಳಿಕೆಯೂ ಇದೇ ತತ್ವದ ಮೇಲೆ ಹರಡುತ್ತದೆ.

ವೈಜ್ಞಾನಿಕ ಅಧ್ಯಯನಗಳು ಇನ್ನಷ್ಟು ಕುತೂಹಲಕಾರಿ ವಿಚಾರಗಳನ್ನು ಹೇಳುತ್ತವೆ. “ಕಾಂಟೇಜಿಯಸ್ ಯಾನಿಂಗ್” ಎನ್ನುವ ಈ ಪ್ರಕ್ರಿಯೆ ಸಾಮಾನ್ಯವಾಗಿ ಸಹಾನುಭೂತಿ (ಎಂಪಥಿ) ಮಟ್ಟದೊಂದಿಗೆ ಸಂಬಂಧ ಹೊಂದಿದೆ. ಅಂದರೆ, ನಮ್ಮೊಂದಿಗೆ ಭಾವನಾತ್ಮಕವಾಗಿ ಹತ್ತಿರವಿರುವವರಿಂದ ಆಕಳಿಕೆ ಬೇಗ ಹರಡುತ್ತದೆ. ಕುಟುಂಬದವರು, ಸ್ನೇಹಿತರು ಅಥವಾ ಪರಿಚಿತರು ಆಕಳಿಸಿದಾಗ ನಾವು ಸಹ ಆಕಳಿಸುವ ಸಾಧ್ಯತೆ ಹೆಚ್ಚು.

ಇದನ್ನು ಸ್ವಲ್ಪ ಹಾಸ್ಯಾತ್ಮಕವಾಗಿ ನೋಡಿದರೆ, ಒಂದು ಸಭೆಯಲ್ಲಿ ಹಿಂಬದಿಯಲ್ಲಿ ಕೂತಿರುವ ಒಬ್ಬನು ಆಕಳಿಸಿದರೆ, ನಿಧಾನವಾಗಿ ಅದು ಸಾಲು ಸಾಲಾಗಿ ಮುಂದುವರಿದು ಕೊನೆಗೆ ಮಾತನಾಡುತ್ತಿರುವ ವ್ಯಕ್ತಿಯವರೆಗೂ ತಲುಪುವುದು ಅಪರೂಪವೇನಲ್ಲ! ಆ ಸಂದರ್ಭದಲ್ಲಿ ಸಭೆಯ ವಿಷಯವೇ ಮರೆತು “ಆಕಳಿಕೆಯ ಸರಪಳಿ” ಮುಖ್ಯವಾಗಿಬಿಡುತ್ತದೆ! ಆದರೆ ಇದರ ಹಿಂದೆ ಅಡಗಿರುವುದು ನಮ್ಮ ಮೆದುಳಿನ ಸಹಜ ಪ್ರತಿಕ್ರಿಯೆ ಮತ್ತು ಸಾಮಾಜಿಕ ಸಂಪರ್ಕದ ಲಕ್ಷಣ.

ಇದರ ಆಧಾರದಲ್ಲಿ ನೋಡಿದರೆ, ಆಕಳಿಕೆ ಸಾಂಕ್ರಾಮಿಕವೆಂಬುದು ಸಂಪೂರ್ಣ ತಪ್ಪಲ್ಲ, ಆದರೆ ಅದು ವೈರಸ್ ಅಥವಾ ಬ್ಯಾಕ್ಟೀರಿಯಾದಂತೆ ಹರಡುವುದಿಲ್ಲ. ಇದು ಮೆದುಳಿನ ಕಾರ್ಯವಿಧಾನ, ಅನುಕರಣ ಶಕ್ತಿ ಮತ್ತು ಮಾನವೀಯ ಸಹಾನುಭೂತಿಯ ಸಂಯೋಜನೆ. ಹೀಗಾಗಿ, ಮುಂದಿನ ಬಾರಿ ಯಾರಾದರೂ ಆಕಳಿಸಿದಾಗ ನಿಮಗೂ ಆಕಳಿಕೆ ಬಂದರೆ, ಅದನ್ನು ನಿದ್ರೆಯ ಸೂಚನೆ ಎಂದು ಮಾತ್ರ ಅರ್ಥೈಸಬೇಡಿ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share