Thursday, October 22, 2026
HomeCrimeಜೋಯಿಡಾ | ಹೋಂಸ್ಟೇಗೆ ಬೆಂಕಿ: ರೂ.70 ಲಕ್ಷಕ್ಕೂ ಅಧಿಕ ನಷ್ಟ

ಜೋಯಿಡಾ | ಹೋಂಸ್ಟೇಗೆ ಬೆಂಕಿ: ರೂ.70 ಲಕ್ಷಕ್ಕೂ ಅಧಿಕ ನಷ್ಟ

ಜೋಯಿಡಾ: ನಿರ್ಜನ ಪ್ರದೇಶದಲ್ಲಿದ್ದ ಹೋಂಸ್ಟೇಗೆ ಯಾರೋ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿ ಸುಟ್ಟುಹಾಕಿರುವ ಘಟನೆ ಜೋಯಿಡಾ ತಾಲೂಕಿನ ಕ್ಯಾಸಲ್‌ರಾಕ್ ವ್ಯಾಪ್ತಿಯಲ್ಲಿ ನಡೆದಿದ್ದು, ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆಯಲ್ಲಿ ಹೋಂಸ್ಟೇ ಕಟ್ಟಡ ಹಾಗೂ ಅದರಲ್ಲಿದ್ದ ಪೀಠೋಪಕರಣಗಳು ಸೇರಿದಂತೆ ದಿನಬಳಕೆಯ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ರೂ.70 ಲಕ್ಷಕ್ಕೂ ಅಧಿಕ ಮೌಲ್ಯದ ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜೋಯಿಡಾ ತಾಲೂಕಿನ ಸರ್ವೇ ನಂ.25, ಪೊಪ್ಪಲವಾಡಿ, ಕ್ಯಾಸಲ್‌ರಾಕ್ ನಿವಾಸಿ ಹಾಗೂ ಉದ್ಯಮಿಯಾಗಿರುವ ಜಾನ್ ಪೊಲಾಡ ಅವರ ಪತ್ನಿ ಸೆಲ್ವಿಯಾ ಕೇರ್ಕರ್ (57) ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಪ್ರಕಾರ, ಸೆಲ್ವಿಯಾ ಕೇರ್ಕರ್ ಅವರು ಸರ್ವೇ ನಂ.25ರ ಜಮೀನಿನಲ್ಲಿ ‘ಆಫ್ ದಿ ಗ್ರೀಡ್’ ಹೆಸರಿನ ಹೋಂಸ್ಟೇ ನಡೆಸುತ್ತಿದ್ದರು. ಈ ಪ್ರದೇಶದಲ್ಲಿ ಮುಂಗಾರು ಸಂದರ್ಭದಲ್ಲಿ ಭಾರಿ ಮಳೆಯಾಗುವುದಲ್ಲದೆ, ವಿದ್ಯುತ್ ಹಾಗೂ ಸೂಕ್ತ ರಸ್ತೆ ಸಂಪರ್ಕವಿಲ್ಲದ ಕಾರಣ ಪ್ರತಿ ವರ್ಷ ಮಳೆಗಾಲದಲ್ಲಿ ಹೋಂಸ್ಟೇಗೆ ಬೀಗ ಹಾಕಿ ಮುಚ್ಚಲಾಗುತ್ತಿತ್ತು.

ಜೂನ್ 2026ರಲ್ಲಿ ಸೆಲ್ವಿಯಾ ಕೇರ್ಕರ್ ಅವರು ತಮ್ಮ ಪತಿ ಜಾನ್ ಪೊಲಾಡ ಅವರೊಂದಿಗೆ ಯು.ಕೆ.ಗೆ ತೆರಳಿ ಅಲ್ಲಿಯೇ ವಾಸವಾಗಿದ್ದರು. ಹೋಂಸ್ಟೇಯ ನಿರ್ವಹಣೆಗಾಗಿ ಜೀವಾ ಮತ್ತು ಸೌಮ್ಯಾ ಎಂಬುವರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ತಾವು ತೆರಳುವ ಸಂದರ್ಭದಲ್ಲಿ ಹೋಂಸ್ಟೇಗೆ ಬೀಗ ಹಾಕಿಕೊಂಡು ಹೋಗುವಂತೆ ಕೆಲಸಗಾರರಿಗೆ ಸೂಚಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅದರಂತೆ ಜೂನ್ 2ರಂದು ಜೀವಾ ಮತ್ತು ಸೌಮ್ಯಾ ಹೋಂಸ್ಟೇಗೆ ಬೀಗ ಹಾಕಿ ತಮಿಳುನಾಡಿನಲ್ಲಿರುವ ತಮ್ಮ ಸ್ವಂತ ಊರಿಗೆ ತೆರಳಿದ್ದರು. ಬಳಿಕ ಜುಲೈ 2ರಂದು ಹೋಂಸ್ಟೇ ನೋಡಿಕೊಂಡು ಹೋಗಲು ಸೌಮ್ಯಾ ಅವರು ಅಲ್ಲಿಗೆ ತೆರಳಿದಾಗ, ಹೋಂಸ್ಟೇಗೆ ಯಾರೋ ಅಪರಿಚಿತರು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿ ಸುಟ್ಟುಹಾಕಿರುವುದು ಕಂಡುಬಂದಿದೆ. ಈ ವಿಷಯವನ್ನು ಸೌಮ್ಯಾ ಅವರು ಫೋನ್ ಮೂಲಕ ಸೆಲ್ವಿಯಾ ಕೇರ್ಕರ್ ಅವರಿಗೆ ತಿಳಿಸಿದ್ದರು.

ಕೆಲ ದಿನಗಳ ಬಳಿಕ ಯು.ಕೆ.ಯಿಂದ ವಾಪಸ್ ಬಂದ ಸೆಲ್ವಿಯಾ ಕೇರ್ಕರ್ ಅವರು ಹೋಂಸ್ಟೇಗೆ ತೆರಳಿ ಪರಿಶೀಲಿಸಿದಾಗ, ರೂ.70 ಲಕ್ಷಕ್ಕೂ ಅಧಿಕ ಮೌಲ್ಯದ ಕಟ್ಟಡ ಹಾಗೂ ಅದರಲ್ಲಿದ್ದ ಪೀಠೋಪಕರಣಗಳು, ದಿನಬಳಕೆಯ ವಸ್ತುಗಳು ಸೇರಿದಂತೆ ಎಲ್ಲವೂ ಬೆಂಕಿಯಿಂದ ಹಾನಿಗೊಳಗಾಗಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹೋಂಸ್ಟೇ ಇರುವ ಪ್ರದೇಶ ತೀರಾ ನಿರ್ಜನವಾಗಿದ್ದು, ಬೆಂಕಿ ಹಚ್ಚಿದ ಕೃತ್ಯವನ್ನು ಕಣ್ಣಾರೆ ನೋಡಿದ ಯಾವುದೇ ಸಾಕ್ಷಿಗಳು ಲಭ್ಯವಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಯು.ಕೆ.ಯಲ್ಲಿದ್ದ ಕಾರಣ ಹಾನಿಗೊಳಗಾದ ಹೋಂಸ್ಟೇಯನ್ನು ಪರಿಶೀಲಿಸಿ, ಬಳಿಕ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿರುವುದಾಗಿ ಸೆಲ್ವಿಯಾ ಕೇರ್ಕರ್ ತಿಳಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share