Ad
Home Crime ಗಣೇಶ ಮಂಟಪದ ಅಲಂಕಾರ ವೇಳೆ ಅವಘಡ | ಗಾಯಗೊಂಡಿದ್ದ ಯುವಕ ಸಾವು; ಅಂಗಾಂಗ ದಾನ

ಗಣೇಶ ಮಂಟಪದ ಅಲಂಕಾರ ವೇಳೆ ಅವಘಡ | ಗಾಯಗೊಂಡಿದ್ದ ಯುವಕ ಸಾವು; ಅಂಗಾಂಗ ದಾನ

0
3

ಜೋಯಿಡಾ: ಗಣೇಶೋತ್ಸವಕ್ಕಾಗಿ ಮನೆಯಲ್ಲೇ ಮಂಟಪದ ಅಲಂಕಾರ ಮಾಡುತ್ತಿದ್ದ ವೇಳೆ ಸಂಭವಿಸಿದ ಆಕಸ್ಮಿಕ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜೋಯಿಡಾ ತಾಲೂಕಿನ ರಾಮನಗರದ 26 ವರ್ಷದ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ದುಃಖದ ನಡುವೆಯೂ ಕುಟುಂಬದವರು ಅವರ ಉಪಯುಕ್ತ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ರಾಮನಗರದ ಹನುಮಾನಗಲ್ಲಿಯ ಮಹೇಂದ್ರ ಮಾರುತಿ ಮಳೆಕರ (26) ಮೃತಪಟ್ಟವರು. ಸೆ.12ರಂದು ಬೆಳಗಿನ ಜಾವ ಸುಮಾರು 2.30ರ ವೇಳೆಗೆ ಘಟನೆ ನಡೆದಿದೆ.

ಮನೆಯ ಗಣೇಶ ಮಂಟಪದ ಅಲಂಕಾರ ಕಾರ್ಯದಲ್ಲಿ ಮಹೇಂದ್ರ ಕೂಡ ತೊಡಗಿಸಿಕೊಂಡಿದ್ದರು. ಅಲಂಕಾರಕ್ಕಾಗಿ ಬಳಸುವ ಚೀಲಗಳಿಗೆ ಕಬ್ಬಿಣದ ಮೊಳೆಗಳನ್ನು ಹೊಡೆದು ಕೆಲಸ ಮುಗಿಸಿದ ಬಳಿಕ ಅವರು ಸೋಫಾದ ಮೇಲೆ ಕುಳಿತು ಮೊಬೈಲ್ ನೋಡುತ್ತಿದ್ದರು. ಬಳಿಕ ಮಲಗಲು ಸೋಫಾದಿಂದ ಎದ್ದು ಹಾಸಿಗೆ ಕಡೆಗೆ ಬರುತ್ತಿದ್ದಾಗ, ಅವರ ಕಾಲಿಗೆ ಇದ್ದಕ್ಕಿದ್ದಂತೆ ಸೆಳೆತ ಉಂಟಾಗಿ ಆಯತಪ್ಪಿದ್ದಾರೆ. ಈ ವೇಳೆ ಅಲಂಕಾರದ ಕೆಲಸಕ್ಕಾಗಿ ಹೊಡೆದು ಇಡಲಾಗಿದ್ದ ಕಬ್ಬಿಣದ ಮೊಳೆಯ ಮೇಲೆ ಬಿದ್ದಿದ್ದು, ಮೊಳೆ ಹಣೆಯ ಭಾಗಕ್ಕೆ ಚುಚ್ಚಿಕೊಂಡು ಗಂಭೀರ ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಹೇಂದ್ರ ಅವರ ಮೆದುಳು ನಿಷ್ಕ್ರಿಯಗೊಂಡಿದ್ದು, ಯಾವುದೇ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ಕುಟುಂಬದವರಿಗೆ ತಿಳಿಸಿದ್ದಾರೆ.

ಇದರ ನಡುವೆ ದುಃಖದಲ್ಲಿದ್ದ ಕುಟುಂಬದವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಮಹೇಂದ್ರ ಅವರ ಉಪಯುಕ್ತ ಅಂಗಾಂಗಗಳನ್ನು ಸಂಕಷ್ಟದಲ್ಲಿರುವ ಇತರ ರೋಗಿಗಳ ಜೀವ ಉಳಿಸಲು ದಾನ ಮಾಡಲು ಸ್ವಯಂಪ್ರೇರಿತವಾಗಿ ನಿರ್ಧರಿಸಿದ್ದಾರೆ. ಕುಟುಂಬದ ಒಪ್ಪಿಗೆ ಮೇರೆಗೆ ಕೆ.ಎಲ್.ಇ. ಆಸ್ಪತ್ರೆಯ ವೈದ್ಯರು ಅಗತ್ಯ ಪ್ರಕ್ರಿಯೆ ನಡೆಸಿ ಅಂಗಾಂಗಗಳನ್ನು ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಂತರ ಚಿಕಿತ್ಸೆ ಫಲಿಸದೆ ಮಹೇಂದ್ರ ಅವರು ಮೃತಪಟ್ಟಿದ್ದಾರೆ. ತಮ್ಮ ಮಗನ ಸಾವಿನ ಕುರಿತು ಯಾವುದೇ ಸಂಶಯವಿಲ್ಲ ಎಂದು ತಂದೆ ಮಾರುತಿ ಉಪಾಸೋ ಮಳೆಕರ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!